ವಾಸು ರಾಣ್ಯರ ಪಶ್ಚಿಮ ಘಟ್ಟ ‘ವನವಾಸ’ಕ್ಕೆ ಮುಕ್ತಿ ನೀಡಿತು ಅರಸಿನಮಕ್ಕಿಯ ಶೌರ್ಯ ತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಟ್ಟಿಗೆ ತರಲು ಕಾಡಿಗೆ ಹೋದ ವೃದ್ಧರೋರ್ವರು ವಾಪಸ್ ಮರಳಲು ದಾರಿ ಮರೆತು ಬರೋಬ್ಬರಿ ಆರು ದಿನಗಳನ್ನು ಕಾಡಿನಲ್ಲಿಯೇ ಕಳೆದ ವಿಲಕ್ಷಣ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದ್ದು, ಅರಸಿನಮಕ್ಕಿಯ ಶೌರ್ಯ ವಿಪತ್ತು ನಿರ್ವಹಣಾ ತಂಡ ಭಾರೀ ಸಾಹಸಪಟ್ಟು ಅವರನ್ನು ಹುಡುಕಿ ವಾಪಸ್ ಸುರಕ್ಷಿತವಾಗಿ ಮನೆಗೆ ತಲುಪಿಸಿದೆ.

ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯ ಮೇ 21ರಂದು ಕಟ್ಟಿಗೆ ತರಲೆಂದು ಭಂಡಿಹೊಳೆ ಕಾಡಿಗೆ ಹೋದವರು ಸಂಜೆ ಯಾದರೂ ಬಾರದೇ ನಾಪತ್ತೆಯಾಗಿದ್ದರು. ಇವರನ್ನು ಹುಟುಕಾಡುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿತ್ತು. ಪಶ್ಚಿಮ ಘಟ್ಟದ ದಟ್ಟ ಕಾಡುಗಳ ನಡುವೆ ಕಳೆದುಕೋದ ಇವರನ್ನು ಹುಡುಕುವುದೇ ಸವಾಲಾಗಿತ್ತು. ಈ ವೇಳೆ ನೆರವಿಗೆ ಬಂದ ಶೌರ್ಯ ತಂಡ, ಮೇ 21ರ ಸಂಜೆಯಿಂದ ವಾಸು ರಾಣ್ಯ ಅವರ ಪತ್ತೆಗಾಗಿ ಕಾರ್ಯಾಚರಣೆಗೆ ಮುಂದಾಗಿತ್ತು.

ಮೊದಲಿಗೆ ಕಾಡಿನೊಳಗೆ ಪತ್ತೆಗಾಗಿ ತಮ್ಮೊಳಗೆಯೇ ಎರಡು ತಂಡವಾಗಿಸಿಕೊಂಡರು. ಸತತ ಆರು ದಿನಗಳ ಕಾಲ ಹುಡುಕಾಟ ನಡೆಯಿತಾದರೂ ರಾಣ್ಯ ಪತ್ತೆಯಾಗಿರಲಿಲ್ಲ. ಆದರೆ ಛಲ ಬಿಡದ ತಂಡ ಕಾರ್ಯಾಚರಣೆ ಮುಂದುವರಿಸಿದ್ದು, ಅಂತಿಮವಾಗಿ ತಂಡಕ್ಕೆ ಬೆಟ್ಟದ ಒಂದು ಕಡೆಯಿಂದ ರಾಣ್ಯರ ಕೂ..ಕೂ.. ಎಂಬ ಶಬ್ದ ಕೇಳಿಸಿತ್ತು. ಇದನ್ನು ಬೆನ್ನತ್ತಿದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ, ಕುಶಾಲಪ್ಪ, ಪ್ರವೀಣ್ ಪತ್ತಿಮಾರ್ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕಮಲಾಕ್ಷ ತಂಡ ಅವರನ್ನು ರಕ್ಷಿಸಿ ಮನೆಗೆ ವಾಪಸ್ ಕರೆತಂದಿದೆ.

ಅನ್ನಾಹಾರವಿಲ್ಲದೆ ನಿಶ್ಯಕ್ತಿಯಿಂದ ಬಳಲಿದ್ದ ರಾಣ್ಯ, ಸೊಪ್ಪುಗಳನ್ನೇ ನೆಲಕ್ಕೆ ಹಾಸಿ ಚಾಪೆಯ ರೀತಿ ಮಾಡಿಕೊಂಡು ಮರದ ಕೆಳಗೆ ಆರು ದಿನಗಳನ್ನು ಕಳೆದಿದ್ದರು. ಅಂತಹ ಸ್ಥಿತಿಯಲ್ಲೂ ದೃತಿಗೆಡದೆ ನನ್ನ ಕಾಪಾಡಲು ಯಾರಾದರೂ ಬರಬಹುದು ಎಂಬ ದೃಢ ನಿರೀಕ್ಷೆಯಲ್ಲಿದ್ದರು. ಅವರ ಆತ್ಮವಿಶ್ವಾಸ ಫಲನೀಡಿದೆ. ಮುಖದಲ್ಲಿ ಈಗ ಮತ್ತೆ ನಗುವರಳಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!