ಹೊಸ ದಿಗಂತ ವರದಿ, ವೀರಾಜಪೇಟೆ:
ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಸಭಾಂಗಣದಲ್ಲಿ ಜನವರಿ 21 ರಂದು ನಡೆಯಲಿರುವ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆರ್ಜಿ ಗ್ರಾಮದ ವಿಎಸ್ಎಸ್ಎನ್ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಆಚರಿಸುವ ಕುರಿತು ಎಲ್ಲರೂ ಕೈ ಜೋಡಿಸಬೇಕು. ಕೆಲವು ಸಣ್ಣ ಪುಟ್ಟ ತಪ್ಪುಗಳಾದರೆ ಅದನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ತಾಲೂಕು ಸಮ್ಮೇಳದ ಯಶಸ್ಸಿಗೆ ಎಲ್ಲ ಸಮಾಜದ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ಮುಂದೆ ಬರಬೇಕು. ಎಲ್ಲಾ ಸಮುದಾಯದ ಮುಖಂಡರನ್ನೊಳಗೊಂಡಂತೆ ಆರೋಗ್ಯ, ಸಾಂಸ್ಕೃತಿಕ, ಆಹಾರ, ಸ್ಮರಣ ಸಂಚಿಕೆ ಸೇರಿದಂತೆ 8 ಸಮಿತಿ ರಚಿಸಲಾಗಿದ್ದು, ಪ್ರತಿ ಸಮಿತಿಗೆ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಹೆಸರಾಂತ ಸಾಹಿತಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತ್ಯ ಪರಿಷತ್ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು ಶ್ರಮಿಸಬೇಕೆಂದು ಮನವಿ ಮಾಡಿದರು.
ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಮಣಿ ಅವರು ಮಾತನಾಡಿ, ನಮ್ಮ ಗ್ರಾಮದಲ್ಲಿ ಎಲೆಮರೆಯ ಕಾಯಿಯಂತೆ ಇರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳು ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಮಟ್ಟದಲ್ಲಿಯೂ ಕನ್ನಡದ ಕಂಪು ಪಸರಿಸಬೇಕು ಎನ್ನುವ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲರೂ ಈ ನಿಟ್ಟಿನಲ್ಲಿ ಕನ್ನಡಮ್ಮನ ಸೇವೆಗೆ ತಮ್ಮ ಸಮಯವನ್ನು ಮೀಸಲಿರಿಸಿ ನಾಡು ನುಡಿಯ ರಕ್ಷಣೆಗೆ ಕಟಿಬದ್ದರಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಿಲ್ಲಾ ಉಪ ನಿರ್ದೆಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ಸಮ್ಮೇಳನದ ಅಂಗವಾಗಿ ರಚಿಸಲಾಗಿರುವ ಎಲ್ಲಾ ಉಪಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಕನ್ನಡ ನಾಡು ನುಡಿ ನೆಲ ಜಲದ ರಕ್ಷಣೆಗಾಗಿ ಹೋರಾಡಿದ ಮಹಾನುಭಾವರನ್ನು ಸ್ಮರಿಸುವ ಕೆಲಸ ಆಗಬೇಕಾಗಿದೆ. ತಾಲೂಕು ಮಟ್ಟದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಜಾತಿ, ಪಕ್ಷ ಭೇದ ಮರೆತು ಒಟ್ಟಾಗಿ ಕನ್ನಡದ ಕೈಂಕರ್ಯವನ್ನು ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಈ ಹಿಂದೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆರಿಸಲಾಗಿತ್ತು. ಇದೇ ಸಂದರ್ಭ ಸ್ವಾಗತ ಸಮಿತಿ ಸೇರಿದಂತೆ ಇತರ 8 ಸಮಿತಿಗಳನ್ನು ಆರ್ಜಿ, ಬೇಟೋಳಿ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ರಚಿಸಲಾಯಿತು.
ಗ್ರಾಮದ ವಿವಿಧ ಶಾಲೆಗಳಿಂದ ಒಂದೊಂದು ಸಾಂಸ್ಕೃತಿಕ ತಂಡ ಹಾಗೂ ಶಾಲೆ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಯಿಂದ ಸ್ಥಬ್ದಚಿತ್ರ ಮೆರವಣಿಗೆಗೆ ಸಿದ್ದತೆ ಮಾಡಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಸಮ್ಮೇಳನ ಕುರಿತು ಮುಂದಿನ ಹಂತದ ಎಲ್ಲಾ ಸಮಿತಿಗಳ ಪೂರ್ವಬಾವಿ ಸಭೆಯನ್ನು ಡಿಸೆಂಬರ್ 17ರ ಪೂರ್ವಾಹ್ನ 10.30 ಗಂಟೆಗೆ ಆರ್ಜಿ ಗ್ರಾಮದ ವಿಎಸ್ಎಸ್ಎನ್ ಸಭಾಂಗಣದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದ ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ, ಸಾವಿತ್ರಿ, ಟೋಮಿ ಥೋಮಸ್, ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಸಾಹಿತಿ ರಜಿತಾ ಕಾರ್ಯಪ್ಪ, ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಗ್ರಾಮದ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.