ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಸುರಿದ ಮಳೆಯಿಂದಾಗಿ ತರಕಾರಿಗಳು ಕೊಳೆತು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ನಗರದ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಶಾಕ್ ಆಗಿದ್ದಾರೆ.
ಬೀನ್ಸ್, ನುಗ್ಗೆಕಾಯಿ, ಬದನೆಕಾಯಿ, ಕ್ಯಾರೆಟ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಯಾವ ತರಕಾರಿ ಕೇಳಿದ್ರೂ ಎಲ್ಲವೂ 50 ರಿಂದ 100 ರೂಪಾಯಿ ತಲುಪಿದೆ. ಕೇವಲ ಈರುಳ್ಳಿ ಮಾತ್ರ ಕೈಗೆಟುಕುವಂತಿದೆ. ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಅಷ್ಟೇ ಅಲ್ಲ, ಹಾಪ್ ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ.
ಒಂದು ಕೆಜಿ ಬೀನ್ಸ್ ಹಿಂದೆ 40 ರಿಂದ 50 ರೂಪಾಯಿಗೆ ಸಿಗುತ್ತಿತ್ತು, ಸದ್ಯ 100ರ ಗಡಿದಾಟಿದೆ. ಹಾಗೆಯೇ 30 ರೂಪಾಯಿಗೆ ಸಿಗ್ತಿದ್ದ ಮೈಸೂರು ಬದನೆ ಈಗ 60 ರಿಂದ 80 ರೂಪಾಯಿ ಆಗಿದೆ. ಕ್ಯಾರೆಟ್ 30 ರಿಂದ 60ಕ್ಕೆ ಜಿಗಿದಿದೆ. ನುಗ್ಗಿಕಾಯಿಯಂತೂ 40 ರೂಪಾಯಿ ಇದ್ದಿದ್ದು, 100 ರೂಪಾಯಿ ತಲುಪಿದೆ. ತರಕಾರಿ ಮಾತ್ರವಲ್ಲ ಕೊತ್ತಂಬರಿ, ಮೆಂತ್ಯೆ, ಪಾಲಕ್ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ. ಒಟ್ನಲ್ಲಿ ಕಳೆದ ವಾರಕ್ಕೆ ಹೋಲಿಸಿದ್ರೆ, ಈ ವಾರ ಶೇಕಡಾ 10 ರಿಂದ 25 ರಷ್ಟು ತರಕಾರಿಗಳ ದರ ದುಪ್ಪಟ್ಟು ಆಗಿದೆ.
ತರಕಾರಿಗಳ ಬೆಲೆ ಏರಿಕೆ ಕಂಡು ಸಿಲಿಕಾನ್ ಸಿಟಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಯೊಂದು ತರಕಾರಿಗಳ ಬೆಲೆ 100 ರೂ. ದಾಟಿದೆ. ಕಾಂಗ್ರೆಸ್ನವರು ಗ್ಯಾರಂಟಿ ತಂದು ಇಲ್ಲಿ ಜಾಸ್ತಿ ಮಾಡಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಉಚಿತ ಬೇಕಿಲ್ಲ. ಪ್ರತಿಯೊಂದರ ಬೆಲೆ ಜಾಸ್ತಿ ಆದರೆ ಜೀವನ ನಡೆಸಲು ತುಂಬಾ ಕಷ್ಟ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬೆಲೆ ಏರಿಕೆಯಿಂದ ಒಂದು ಕೆಜಿ ತೆಗೆದುಕೊಳ್ಳವರು ಅರ್ಧ ಕೆಜೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.