ಸಮಾನತೆ, ನ್ಯಾಯ ,ಧರ್ಮ ಪಸರಿಸಿದ ಮಹರ್ಷಿ ವಾಲ್ಮೀಕಿ ಪೂಜ್ಯನೀಯರು: ಗೃಹ ಸಚಿವ ಜಿ. ಪರಮೇಶ್ವರ್

ಹೊಸದಿಗಂತ ವರದಿ ತುಮಕೂರು:

ಮನುಕುಲಕ್ಕೆ ಸಮಾನತೆ, ನ್ಯಾಯ, ಧರ್ಮ ಪಸರಿಸಿದ ಮರ್ಹಷಿ ವಾಲ್ಮೀಕಿಯು ಪೂಜ್ಯನೀಯರಾಗಿದ್ದಾರೆ. ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟಂತಹ ಅವರ ವಿಚಾರಧಾರೆಗಳು, ತತ್ವಗಳನ್ನು ಅರಿತು ನಾವೆಲ್ಲರು ಬಾಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಾಣ ಗ್ರಂಥದಲ್ಲಿನ ನೈತಿಕ ಮೌಲ್ಯಗಳು, ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಹಲವು ಘಟನೆಗಳಿಗೆ ಹತ್ತಿರವಾಗಿವೆ ಎಂದರು.

ರಾಮಾಯಣ ಗ್ರಂಥದಲ್ಲಿನ ಮೌಲ್ಯಗಳು ವ್ಯವಸ್ಥೆಗಳ ಸುಧಾರಣೆಗೆ ಹಾಗೂ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ರೀತಿಯಲ್ಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ವ್ಯಕ್ತಿಯು ಅಂದಿನ ಕಾಲಘಟ್ಟದಲ್ಲಿ ಜರುಗಿದ ಜನರ ಜೀವನ ಶೈಲಿಯ ಕುರಿತು ಸಾಹಿತ್ಯ ಸೃಷ್ಟಿಸುವ ಮೂಲಕ ಅಸಾಧಾರಣನಾಗಿ ರೂಪುಗೊಂಡ ರೀತಿ ಸರ್ವರಿಗೂ ಆದರೀಣಿಯವಾದದ್ದು, ನಾಡಿನ ಬಹುತೇಕ ಕವಿಗಳು ಅವರ‌ನ್ನು ಸಾಹಿತ್ಯದಲ್ಲಿ ಉಲ್ಲೇಖಿಸಿದ್ದು, ಋಷಿ ವಾಲ್ಮೀಕಿಯು ಎಲ್ಲಾ ಜನಾಂಗದವರಿಗೂ ಆದರ್ಶ ಪುರುಷರಾಗಿದ್ದಾರೆ ಎಂದರು.

ಚಿತ್ರದುರ್ಗದ ಮದಕರಿನಾಯಕನ ಇತಿಹಾಸ ಓದದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ, ಜಿಲ್ಲೆಯಲ್ಲಿ ಪ.ಪಂಗಡದ 18 ವಸತಿ ನಿಲಯಗಳಿದ್ದು, 4 ಸಾವಿರಕ್ಕೂ ಹೆಚ್ಚು ಸಮುದಾಯದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ನಾನು ಸಮುದಾಯಗಳಿಗೆ ಮನವಿ ಮಾಡುತ್ತೇನೆ ಸರ್ಕಾರ ದೀನದಲಿತರ ಅಭಿವೃದ್ಧಿಗಾಗಿ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದ್ದು, ಶೈಕ್ಷಣಿಕ ಮೀಸಲಾತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಸಮುದಾಯದ ಶೋಷಿತ ಮತ್ತು ದುರ್ಬಲವರ್ಗದವರು ವಿದ್ಯಾವಂತರಾಗಿ ದೇಶದ ಪ್ರಗತಿಗೆ ಕೈ ಜೋಡಿಸಬೇಕು, ಸಮುದಾಯಗಳು ಅಭಿವೃದ್ದಿಗೊಂಡರೆ ದೇಶ ಅಭಿವೃದ್ಧಿಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿಧ್ಯಾರ್ಥಿನಿಗೆ ಒಂದು ಲಕ್ಷ ಮಂಜೂರಾತಿ ಪತ್ರ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.

ಪೂಜ್ಯ ಸಂಜಯ್ ಕುಮಾರ್ ಸ್ವಾಮಿಜಿಯವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಸರ್ವರನ್ನು ಸ್ವಾಗತಿಸಿದರು.

ಶಾಸಕ ಸುರೇಶಗೌಡ, ಜಿಲ್ಲಾಧಿಕಾರಿ ಶ್ರೀನಿವಾಸ ಕೆ., ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಿ ಪ್ರಭು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ , ಜಿಲ್ಲಾ ಪರಿಶಿಷ್ಟ ಪಂಗಡಗಳ ವ್ಯವಸ್ಥಾಪಕರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಸಂಘಟನೆಯ ಪಧಾಧಿಕಾರಿಗಳು ಹಾಗೂ ಮಹರ್ಷಿ ವಾಲ್ಮೀಕಿಯ ಅಭಿಮಾನಿಗಳು ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!