ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆನೆಜುವೆಲಾ ಅಧ್ಯಕ್ಷರ ಬಂಧನದ ಬಳಿಕ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಮತ್ತೊಂದು ಕಠಿಣ ತಿರುವು ಕಂಡುಬಂದಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್ ಮತ್ತು ಕ್ಯೂಬಾವನ್ನು ಅಮೆರಿಕದ ನಿಯಂತ್ರಣಕ್ಕೆ ತರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಹೇಳಿಕೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಇದೇ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ, ಕ್ಯೂಬಾದ ಕಮ್ಯುನಿಸ್ಟ್ ಸರ್ಕಾರ ತೀವ್ರ ಸಂಕಷ್ಟದಲ್ಲಿದೆ ಎಂದು ಹೇಳಿರುವುದು ಟ್ರಂಪ್ ಆಡಳಿತ ಪಶ್ಚಿಮ ಭಾಗದಲ್ಲಿ ತನ್ನ ಪ್ರಭಾವ ವಿಸ್ತರಿಸಲು ಸಜ್ಜಾಗಿದೆ ಎಂಬ ಸಂದೇಶ ನೀಡುತ್ತಿದೆ. ಈ ಬೆಳವಣಿಗೆಗಳು ಅಮೆರಿಕದ ಮಿತ್ರ ಹಾಗೂ ಶತ್ರು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದ್ದು, “ಮುಂದಿನ ಗುರಿ ಯಾವ ದೇಶ?” ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಗ್ರೀನ್‌ಲ್ಯಾಂಡ್‌ಗೆ ತಂತ್ರಜ್ಞಾನದ ಮಹತ್ವವಿದೆ ಎಂದು ಹೇಳಿದರು. ರಷ್ಯಾ ಮತ್ತು ಚೀನಾ ಹಡಗುಗಳ ಚಟುವಟಿಕೆ ಅಲ್ಲಿ ಹೆಚ್ಚಿರುವುದರಿಂದ, ರಾಷ್ಟ್ರೀಯ ಭದ್ರತೆಗಾಗಿ ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್ ಅಗತ್ಯ ಎಂದು ಟ್ರಂಪ್ ಅಭಿಪ್ರಾಯಪಟ್ಟರು. ಡೆನ್ಮಾರ್ಕ್‌ಗೆ ಆ ಪ್ರದೇಶವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದೂ ಹೇಳಿದರು.
ಇದನ್ನೂ ಓದಿ: FOOD | ಬಟರ್ ಗಾರ್ಲಿಕ್ ಪಾಸ್ತಾ: ಮನೆಯಲ್ಲೇ ತಯಾರಿಸಬಹುದು ರುಚಿಕರ ಇಟಾಲಿಯನ್ ಡಿಶ್
ವೆನೆಜುವೆಲಾ ಮಾದರಿಯ ಕಾರ್ಯಾಚರಣೆಗಳು ಇತರ ರಾಷ್ಟ್ರಗಳಿಗೆ ಸಂದೇಶ ನೀಡುತ್ತವೆಯೇ ಎಂಬ ಪ್ರಶ್ನೆಗೆ ಟ್ರಂಪ್, “ಅರ್ಥ ಮಾಡಿಕೊಳ್ಳುವುದು ನಿಮ್ಮ ಮೇಲೇ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ಜೊತೆಗೆ ಮೆಕ್ಸಿಕೋ, ಕ್ಯೂಬಾ ಮತ್ತು ಕೊಲಂಬಿಯಾ ದೇಶಗಳಿಂದ ಡ್ರಗ್ಸ್ ಅಮೆರಿಕಕ್ಕೆ ಹರಿದು ಬರುತ್ತಿದ್ದು, ನಮ್ಮ ಜನರ ಬದುಕಿಗೆ ಧಕ್ಕೆ ತರುತ್ತಿದೆ ಎಂದು ಅವರು ಆರೋಪಿಸಿದರು.
ಇತ್ತ ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟ್ಟೆ ಫ್ರೆಡರಿಕ್ಸನ್ ಪ್ರತಿಕ್ರಿಯಿಸಿ, ಗ್ರೀನ್‌ಲ್ಯಾಂಡ್ ಅಮೆರಿಕದ ವಿಲೀನಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡೆನ್ಮಾರ್ಕ್ ನಾಟೋ ಸದಸ್ಯ ರಾಷ್ಟ್ರವಾಗಿದ್ದು, ಈಗಾಗಲೇ ಭದ್ರತಾ ಸಹಕಾರ ನೀಡುತ್ತಿದೆ. “ನಮ್ಮ ದೇಶ ಮಾರಾಟಕ್ಕಿಲ್ಲ” ಎಂದು ಅವರು ಖಡಕ್ ಸಂದೇಶ ನೀಡಿದ್ದಾರೆ.

