ಹಿರಿಯ ಸಾಹಿತಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ವಾಮನ ನಂದಾವರ ವಿಧಿವಶ

ಹೊಸದಿಗಂತ ವರದಿ ಮಂಗಳೂರು:

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ.ವಾಮನ ನಂದಾವರ ಅವರು ಇಂದು ಬೆಳಗ್ಗೆ ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ ನಿಧನ ಹೊಂದಿದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವರು ತುಳು ಭಾಷಾ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ, ಕಮ್ಮಟ ಏರ್ಪಾಟು, ಭಾಗವಹಿಸುವಿಕೆಯಲ್ಲಿ ಮುಂಚೂಣಿಯಲ್ಲಿದ್ದ ಡಾ. ನಂದಾವರ, ತುಳು ಪಠ್ಯ ಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ, ತುಳು ಜಾನಪದ ಪತ್ರಿಕೆ ಮಂಡಲಿಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ.
ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿ ದುಡಿದ ಅವರು, ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದರು. ಮಂಗಳೂರು ದರ್ಶನ ಯೋಜನೆಯ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ವಾಮನ ನಂದಾವರ ಅವರು ಹಲವು ಕೃತಿಗಳನ್ನು ಹೊರ ತಂದಿದ್ದಾರೆ. ತಾಳಮೇಳ (ಕನ್ನಡ ಕವನ ಸಂಕಲನ), ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ), ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ), ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ), ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು), ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ’, ‘ಜಾನಪದ ಸುತ್ತಮುತ್ತ’., ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’, ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ, ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್’, ತುಳು , ಕವನ ಸಂಕಲನ ‘ಬೀರ’. ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ತುಳು ಜಾನಪದ ಕತೆ ‘ಕಿಡಿಗೇಡಿಯ ಕೀಟಲೆ’, ಮಕ್ಕಳ ಕಥೆ ‘ಕೋಟಿ ಚೆನ್ನಯ’ ಅವರ ಕೃತಿಗಳು.

ವಾಮನ ನಂದಾವರ ಅವರ ತುಳುವರ ಕುಸಾಲ್ ಕುಸೆಲ್ ಕೃತಿಗೆ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯ ಪ್ರಶಸ್ತಿ, ಸಿಂಗದನ ಮತ್ತು ಜಾನಪದ ಸುತ್ತ ಮುತ್ತ ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಸ್ಕಾರ, ‘ಕೋಟಿ ಚೆನ್ನಯ ಜಾನಪದೀಯ ಅಧ್ಯಯನದ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ. ಬನ್ನಂಜೆ ಬಾಬು ಅಮಿನ್ ಪ್ರಶಸ್ತಿ. ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ. ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರಗಳು ಅವರಿಗೆ ಲಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!