ಹಿರಿಯ ಸಾಹಿತಿ ಡಾ.ಕಮಲಾ ಹಂಪನ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಹಿರಿಯ ಸಾಹಿತಿ, ಲೇಖಕಿ ಡಾ ಕಮಲಾ ಹಂಪನಾ(88) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಪುತ್ರಿ ಡಾ. ಆರತಿ ಮನೆಯಲ್ಲಿ ವಾಸವಿದ್ದರು. ಕಳೆದ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವರ ದೇಹವನ್ನು ಲೀಲಾವತಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಅವರು ಪತಿ ಹಿರಿಯ ಸಾಹಿತಿ ಡಾ ಹಂ.ಪ.ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರು, ಹಿತೈಷಿಗಳನ್ನು ಅಗಲಿದ್ದಾರೆ. ಕಮಲಾ ಹಂಪನಾ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದರು.

ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ ಅವರ ಧೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ  ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ.

ಡಾ.ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!