ವಿಶ್ವಸಂಸ್ಥೆಯಲ್ಲಿ ಗಾಜಾ ಕದನ ವಿರಾಮ ನಿರ್ಣಯಕ್ಕೆ ‘ವೀಟೋ’ ಅಡ್ಡಗಾಲು: ಅಮೆರಿಕ ನಡೆಗೆ ವಿಶ್ವದ ರಾಷ್ಟ್ರಗಳ ಖಂಡನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮವನ್ನು ಕೋರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕ ವೀಟೋ ಮೂಲಕ ತಿರಸ್ಕರಿಸಿದ್ದು, ಈ ನಡೆಗೆ ಅನೇಕ ದೇಶಗಳು ವಿಷಾದ ವ್ಯಕ್ತಪಡಿಸಿವೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್,’ಕರಡನ್ನು ಯುಎಸ್ ವೀಟೋ ಮಾಡಿರುವುದಕ್ಕೆ ನಾವು ತೀವ್ರ ನಿರಾಶೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಎರಡು ತಿಂಗಳ ಹೋರಾಟ ಈಗಾಗಲೇ ಅಗಾಧ ಪ್ರಮಾಣದ ಸಾವು ಮತ್ತು ನಾಶಕ್ಕೆ ಕಾರಣವಾಗಿದೆ, ಹೀಗಾಗಿ ಇಲ್ಲಿ ತಕ್ಷಣದ ಕದನ ವಿರಾಮ ಅಗತ್ಯವಾಗಿದೆ ಎಂದು ಜಾಂಗ್ ಹೇಳಿದ್ದಾರೆ.

ಪ್ಯಾಲೆಸ್ಟೈನ್ ನ ಖಾಯಂ ವೀಕ್ಷಕ ರಿಯಾದ್ ಎಚ್. ಮನ್ಸೂರ್ ಕೂಡ, ಕೌನ್ಸಿಲ್ ತನ್ನ ಜವಾಬ್ದಾರಿಯನ್ನು ನಿಭಾಯಿಸದಂತೆ ತಡೆದಿರುವುದು ವಿಷಾದನೀಯ ಮತ್ತು ವಿನಾಶಕಾರಿಯಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ಕ್ರಮಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ ವಿಶ್ವಸಂಸ್ಥೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನ ಉಪ ಖಾಯಂ ಪ್ರತಿನಿಧಿ ಮೊಹಮ್ಮದ್ ಅಬುಶಾಬ್ , ಅಮೆರಿಕದ ಈ ಕ್ರಮವು ಗಾಝಾದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಕೌನ್ಸಿಲ್ ಸದಸ್ಯರು ತಮ್ಮ ಪ್ರಯತ್ನ ಮುಂದುವರಿಸುವುದರಿಂದ ತಡೆಯಲಾರದು ಎಂದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ರಷ್ಯಾದ ಮೊದಲ ಉಪ ಖಾಯಂ ಪ್ರತಿನಿಧಿ ಡಿಮಿಟ್ರಿ ಪೊಲಿಯಾನ್ಸ್ಕಿ ಮಾತನಾಡಿ, ಯುಎಸ್ ಮತ್ತೊಮ್ಮೆ ಕದನ ವಿರಾಮದ ಮನವಿಯನ್ನು ನಿರ್ಬಂಧಿಸಿರುವುದು ಮಧ್ಯಪ್ರಾಚ್ಯದ ಕರಾಳ ದಿನಗಳಲ್ಲಿ ಒಂದಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಜಪಾನ್​ನ ಖಾಯಂ ಪ್ರತಿನಿಧಿ ಇಶಿಕಾನೆ ಕಿಮಿಹಿರೊ ಮಾತನಾಡಿ, ಪ್ಯಾಲೆಸ್ಟೈನ್ ಅಥವಾ ಇಸ್ರೇಲ್ ಸೇರಿದಂತೆ ಯಾವುದೇ ದೇಶಗಳ ನಾಗರಿಕರ ಜೀವಹಾನಿ ದುರಂತವಾಗಿರುವುದರಿಂದ ತಮ್ಮ ನಿಯೋಗವು ಕರಡಿನ ಪರವಾಗಿ ಮತ ಚಲಾಯಿಸಿದೆ ಎಂದು ಹೇಳಿದರು. ಆದಾಗ್ಯೂ ಕರಡು ಅಂಗೀಕಾರವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ಯುಎನ್ ಭದ್ರತಾ ಮಂಡಳಿಯು ಯುಎಇ ಸಿದ್ಧಪಡಿಸಿದ ಮತ್ತು ಸುಮಾರು 100 ದೇಶಗಳ ಬೆಂಬಲದೊಂದಿಗೆ ಗಾಜಾ ಪಟ್ಟಿಯಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿತ್ತು. ಇದರಲ್ಲಿ 13 ರಾಷ್ಟ್ರಗಳು ಪರವಾಗಿ ಮತ ಚಲಾಯಿಸಿದರೆ, ಬ್ರಿಟನ್ ಮತದಾನದಿಂದ ದೂರ ಉಳಿಯಿತು. ಯುಎಸ್ ವಿರುದ್ಧವಾಗಿ ಮತ ಚಲಾಯಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!