ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಿ ಮಲಿವಾಲ್ ಆಪಾದಿತ ಹಲ್ಲೆ ಪ್ರಕರಣದಲ್ಲಿ ಆಪ್ತ ಸಹಾಯಕ (ಪಿಎ) ಬಿಭವ್ ಕುಮಾರ್ ಬಂಧನವನ್ನು ಪ್ರತಿಭಟಿಸಿ ಭಾನುವಾರ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ.
ಕೇಜ್ರಿವಾಲ್ ಅವರುಮೇ 18ರ ಶನಿವಾರದಂದು 2 ನಿಮಿಷ 33 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ಪ್ರಕಟಿಸಿದರು. ಬಿಜೆಪಿ ನಮ್ಮನ್ನು ತುಳಿಯಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನನ್ನನ್ನು ಜೈಲಿಗೆ ಹಾಕಿದರು, ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಿದರು, ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಹಾಕಿದರು, ಸಂಜಯ್ ಸಿಂಗ್ ಅವರನ್ನು ಜೈಲಿಗೆ ಹಾಕಿದರು, ಇಂದು ನನ್ನ ಪಿಎ (ಬಿಭವ್ ಕುಮಾರ್) ಅವರನ್ನು ಜೈಲಿಗೆ ಹಾಕಿದರು. ಈಗ ರಾಘವ್ ಚಡ್ಡಾ ಅವರನ್ನೂ ಜೈಲಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ರಾಘವ್ ಚಡ್ಡಾ ಅವರು ಲಂಡನ್ನಿಂದ ಹಿಂತಿರುಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸೌರಭ್ ಭಾರದ್ವಾಜ್ ಕೂಡ ಜೈಲು ಪಾಲಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಅತಿಶಿಯನ್ನೂ ಜೈಲಿಗೆ ಹಾಕಲಾಗುವುದು ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.