ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಬುಧವಾರ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದು, ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ನೈನಿತಾಲ್ ರಾಜಭವನಕ್ಕೆ ಕರೆದೊಯ್ಯಲಾಯಿತು.
ಕುಮಾವೂನ್ ವಿಶ್ವವಿದ್ಯಾಲಯದ 50ನೇ ವಾರ್ಷಿಕೋತ್ಸವ ಆಚರಣೆಗೆ ಉಪರಾಷ್ಟ್ರಪತಿಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಸ್ವಲ್ಪ ಸಮಯದ ನಂತರ ಅನಿರೀಕ್ಷಿತವಾಗಿ ಅವರ ಆರೋಗ್ಯ ಹದಗೆಟ್ಟಿತು.
ಭಾಷಣದ ನಂತರ, ಉಪರಾಷ್ಟ್ರಪತಿ ವೇದಿಕೆಯಿಂದ ಇಳಿದು ತಕ್ಷಣ ಅವರ ಆರೋಗ್ಯ ಏರುಪೇರಾಗಿದ್ದು, ಅವರ ಜತೆ ಇದ್ದ ಮಾಜಿ ಸಂಸದ ಡಾ. ಮಹೇಂದ್ರ ಸಿಂಗ್ ಪಾಲ್ ಅವರ ಮೇಲೆಯೇ ಕುಸಿದು ಬಿದ್ದರು. ಸ್ಥಳದಲ್ಲೇ ಇದ್ದ ವೈದ್ಯರ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿತು.
ನಂತರ ಅವರನ್ನು ರಾಜ್ಯಪಾಲ ಗುರ್ಮಿತ್ ಸಿಂಗ್ ಅವರೊಂದಿಗೆ ರಾಜಭವನಕ್ಕೆ ಕರೆದೊಯ್ಯಲಾಯಿತು. ನಂತರ ವೈದ್ಯರು ‘ಉಪರಾಷ್ಟ್ರಪತಿಯವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ’ ಎಂದು ದೃಢಪಡಿಸಿದ್ದಾರೆ.