ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (731408 ಮತಗಳು) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜಯಪ್ರಕಾಶ್ ಹೆಗ್ಡೆ (4,72,505) ವಿರುದ್ಧ ವಿರುದ್ಧ 2,58,903ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ 3 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೋಲು ಕಂಡಿದ್ದರು. ಈ ಬಾರಿ ಎರಡೂ ಪಕ್ಷಗಳು ಸರಳ ಜನನಾಯಕರನ್ನು ಕಣಕ್ಕಿಳಿಸಿದ್ದು, ಕ್ಷೇತ್ರದ ಚುನಾವಣೆ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಈ ಫಲಿತಾಂಶದ ಲೆಕ್ಕಾಚಾರ ಅಷ್ಟು ಸುಲಭವಾಗಿರಲಿಲ್ಲ.
ಕರಾವಳಿ ಕರ್ನಾಟಕದ ಸರಳ ಸಜ್ಜನಿಕೆಯ ಜನನಾಯಕ ಎಂದೇ ಜನಪ್ರಿಯರಾಗಿರುವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಸಚಿವರಾದವರು. ಇದೀಗ ಸಂಸತ್ ಪ್ರವೇಶಿಸಲು ಸಜ್ಜಾಗಿದ್ದಾರೆ.