ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ಯಾವುದಾದರೊಂದು ರೀತಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಯುವತಿಯೊಬ್ಬಳು ಕೂದಲು ಸ್ಟ್ರೈಟ್ ಮಾಡುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಹೊಡೆದಾಟ, ವಿಚಿತ್ರ ಡ್ರೆಸ್ಸಿಂಗ್, ಆಟ, ಹಾಡು… ಹೀಗೆ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಇಂತಹದ್ದನ್ನೆಲ್ಲ ನಿಷೇಧಿಸುವಂತೆ ಪದೇ ಪದೇ ಎಚ್ಚರಿಕೆ ನೀಡಿದರೂ ಜನ ಕಿವಿಗೆ ಹಾಕಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಯುವತಿಯೊಬ್ಬಳು ಕೂದಲು ಸ್ಟ್ರೈಟ್ ಮಾಡುವ ವಿಡಿಯೋ ಹೊರಬಿದ್ದಿದೆ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವಿಟರ್ ಬಳಕೆದಾರ @HasnaZarooriHai ಶೇರ್ ಮಾಡಿರುವ ಈ ವಿಡಿಯೋಗೆ ನೆಟಿಜನ್‌ಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ‘ಅಕ್ಕ.. ವಾಷಿಂಗ್ ಮೆಷಿನ್ ತಗೊಂಡು ನಿಮ್ಮ ಬಟ್ಟೆಯನ್ನೂ ಒಗೆಯಿರಿ’, ಈ ರೈಲು ನಿಮ್ಮ ಮನೆ ಅಲ್ಲ’ ಎಂದು ಮತ್ತೊಬ್ಬರು ಕೋಪೋದ್ರಿಕ್ತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೇವಲ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಇಂತಹ ಕೃತ್ಯ ಎಸಗುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.