ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್ಟರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ತಾವು ವಾಸ್ತವ್ಯವಿದ್ದ ಉಡುಪಿ ಪೇಜಾವರ ಮಠದ ಅತಿಥಿಗೃಹದಲ್ಲಿ ನಿಧನಹೊಂದಿದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಅನೇಕ ಶಿಷ್ಯರನ್ನು ಅಗಲಿದ್ದಾರೆ.
ಜ್ಯೋತಿಷ್ಯ, ವೇದ, ವೇದಾಂತ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಭಟ್ಟರು ಮುಂಬಯಿ ಅದಮಾರು ಮಠದ ಶಾಖೆಯ ವ್ಯವಸ್ಥಾಪಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಪಂಚಮ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣ ಮಠದ ಸಹ ದಿವಾನರಾಗಿಯೂ ಸೇವೆ ಸಲ್ಲಿಸಿದ್ದರು. ಅದೇ ಅವಧಿಯಲ್ಲೇ ಋಗ್ವೇದದ ಪವಮಾನ ಸೂಕ್ತಗಳಿಗೆ ಕನ್ನಡ ವ್ಯಾಖ್ಯಾನ ಬರೆದು ಶ್ರೀ ವಿಶ್ವೇಶತೀರ್ಥರ ಮೂಲಕ ಲೋಕಾರ್ಪಣೆಗೊಳಿಸಿದ್ದರು.
ಭಟ್ಟರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಶ್ರೀಗಳು ಈ ಕೃತಿಯ ಪ್ರಕಾಶನ ಮತ್ತು ಬಿಡುಗಡೆ ತಮ್ಮ ಪಂಚಮ ಪರ್ಯಾಯದ ಉತ್ತಮ ಕಾರ್ಯಗಳಲ್ಲಿ ಒಂದು ಎಂದು ಶ್ಲಾಘಿಸಿದ್ದರು. ಅದರ ಜೊತೆ ಇನ್ನೂ ಕೆಲವು ಕೃತಿಗಳನ್ನೂ ಅವರು ರಚಿಸಿ ಸಾಹಿತ್ಯ ಕೈಂಕರ್ಯ ನಡೆಸಿದ್ದರು. ನೂರಾರು ಶಿಷ್ಯಂದಿರಿಗೆ ವೇದ ಉಪನಿಷತ್ತುಗಳ ಪಾಠವನ್ನು ಸೋಮವಾರದವರೆಗೂ ನಡೆಸಿದ್ದ ವಿಶೇಷ .
ಅವರ ಅಪೇಕ್ಷೆಯಂತೆ ಪಾರ್ಥಿವ ಶರೀರವನ್ನು ಮಣಿಪಾಲದ ಕೆಎಂಸಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಾರ್ಥ ಹಸ್ತಾಂತರಿಸಲಾಯಿತು.
ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು , ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ರಾಮಚಂದ್ರ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಸದ್ಗತಿಯನ್ನು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.