ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಸ್ಪೈ-ಆಕ್ಷನ್ ಥ್ರಿಲ್ಲರ್ ಸಿನಿಮಾ ಕಿಂಗ್‌ಡಮ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಜುಲೈ 31ರಂದು ತೆರೆಗೆ ಬಂದ ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಉತ್ತಮ ಆರಂಭವನ್ನು ಕಂಡಿದ್ದು, ಮೊದಲ ದಿನವೇ 18 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು.
ಎರಡನೇ ದಿನದಂದು ಚಿತ್ರದ ಕಲೆಕ್ಷನ್‌ನಲ್ಲಿ ಶೇ. 58ರಷ್ಟು ಇಳಿಕೆ ಕಂಡು ಕೇವಲ 7.5 ಕೋಟಿ ಗಳಿಸಿತು. ಆದರೆ ಮೂರನೇ ದಿನವಾದ ಶನಿವಾರದಂದು ಚಿತ್ರವು ಮತ್ತೆ ಚೇತರಿಕೆ ಕಂಡು 6.8 ಕೋಟಿ ರುಪಾಯಿಗಳನ್ನು ತನ್ನ ಖಾತೆಗೆ ಸೇರಿಸಿತು. ಒಟ್ಟಾರೆ ಮೊದಲ ಮೂರು ದಿನಗಳಲ್ಲಿ ಚಿತ್ರವು 32.3 ಕೋಟಿ ರುಪಾಯಿ ಗಳಿಕೆಯನ್ನು ದಾಖಲಿಸಿದೆ.
ಕಿಂಗ್‌ಡಮ್‌ಗೆ ತೆಲುಗು ರಾಜ್ಯಗಳಲ್ಲಿ ಶನಿವಾರ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಬೆಳಿಗ್ಗೆ ಪ್ರದರ್ಶನಕ್ಕೆ ಶೇ. 31.25 ಮತ್ತು ಸಂಜೆ ವೇಳೆಗೆ ಶೇ. 47.06ರಷ್ಟು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.
ಚಿತ್ರವು 130 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಇದರ ಒಂದು ದೊಡ್ಡ ಪಾಲು ವಿಜಯ್ ದೇವರಕೊಂಡ ಅವರ ಸಂಭಾವನೆಗೆ ಮೀಸಲಾಗಿದ್ದೆಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ಅವರು 30 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಲಾಭ ಹಂಚಿಕೆ ಒಪ್ಪಂದವೊಂದೂ ಕೂಡ ನಡೆದಿರಬಹುದೆಂದು ಆಂತರಿಕ ಮೂಲಗಳು ತಿಳಿಸುತ್ತವೆ.
ಈ ನಡುವೆ ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರದ ಕಾರ್ಯಾರಂಭದ ಬಗ್ಗೆ ವಿವರ ಹಂಚಿಕೊಂಡಿದ್ದಾರೆ. ಟ್ಯಾಕ್ಸಿವಾಲಾ ಮತ್ತು ಶ್ಯಾಮ್ ಸಿಂಘಾ ರಾಯ್ ಖ್ಯಾತಿಯ ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರೊಂದಿಗೆ ಅವರು ಮತ್ತೊಮ್ಮೆ ಜೋಡಿಯಾಗಲಿದ್ದಾರೆ. ಈ ಹೊಸ ಚಿತ್ರವು ಭಾರತದ ವಸಾಹತುಶಾಹಿ ಇತಿಹಾಸವನ್ನು ಆಧರಿಸಿದ ಅವಧಿ ಸಿನಿಮಾವಾಗಿದ್ದು, ಮುಂದಿನ ವಾರದಿಂದ ಶೂಟಿಂಗ್ ಪ್ರಾರಂಭವಾಗಲಿದೆ.
ಕಿಂಗ್‌ಡಮ್ ಯಶಸ್ಸು ವಿಜಯ್ ದೇವರಕೊಂಡ ಅವರ ಚಲನಚಿತ್ರ ವೃತ್ತಿಜೀವನಕ್ಕೆ ಹೊಸ ಉತ್ಸಾಹ ನೀಡಿದ್ದು, ಅಭಿಮಾನಿಗಳಿಗೂ ವಿಶೇಷ ಸಂಭ್ರಮ ತಂದಿದೆ.