Wednesday, January 14, 2026
Wednesday, January 14, 2026
spot_img

ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ನ ಬಿಗ್ ಟಾರ್ಗೆಟ್ ಚೇಸ್ ಮಾಡಿ ಗೆದ್ದ ಕರ್ನಾಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವದತ್‌ ಪಡಿಕ್ಕಲ್‌ ಅವರ ಸೆಂಚುರಿ ಸಾಹಸದಿಂದ ಕರ್ನಾಟಕ ತಂಡ ಬುಧವಾರ ನಡೆದ ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್‌ನೀಡಿದ 413 ರನ್‌ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ದಾಖಲಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.
ಕಳೆದ ಸಯ್ಯದ ಮುಷ್ತಾಕ್‌ ಅಲಿ ಟಿ20 ಟ್ರೊಫಿಯಲ್ಲಿ ಚಾಂಪಿಯನ್‌ ಆಗಿದ್ದ ಜಾರ್ಖಂಡ್‌ ತಂಡ ವಿಜಯ್‌ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೂ ಅದೇ ಆಟವನ್ನು ಮುಂದುವರಿಸಿತು. ನಾಯಕ ಇಶಾನ್‌ ಕಿಶನ್‌ ಕರ್ನಾಟಕದ ಬೌಲರ್‌ಗಳನ್ನು ದಯನೀಯವಾಗಿ ಬೆಂಡೆತ್ತಿದರು. ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ ಇಶಾನ್‌ ಕಿಶನ್‌, ಕೇವಲ 39 ಎಸೆತಗಳಲ್ಲಿ ಬರೋಬ್ಬರಿ 14 ಸಿಕ್ಸರ್‌ ಹಾಗೂ 7 ಬೌಂಡರಿಗಳಿದ್ದ 125 ರನ್‌ ಬಾರಿಸಿದರು. ಇವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ ಜಾರ್ಖಂಡ್‌ ತಂಡ 9 ವಿಕೆಟ್‌ ನಷ್ಟಕ್ಕೆ 412 ರನ್ ಬಾರಿಸಲು ಯಶ ಕಂಡಿತು.

413 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ನಡೆಸಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ದೇವದತ್‌ ಪಡಿಕ್ಕಲ್‌ ಆಸರೆಯಾದರು. 118 ಎಸೆತಗಳಲ್ಲಿ ಪಡಿಕ್ಕಲ್‌ 10 ಬೌಂಡರಿ, 7 ಸಿಕ್ಸರ್‌ ಇದ್ದ 147 ರನ್‌ ಬಾರಿಸಿ ಮಿಂಚಿದರು. ಇದರಿಂದಾಗಿ ಕರ್ನಾಟಕ ತಂಡ ಕೇವಲ 5 ವಿಕೆಟ್‌ ನಷ್ಟಕ್ಕೆ 413 ರನ್‌ಗಳ ಗುರಿ ತಲುಪಿತು. ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಕರ್ನಾಟಕ ಗುರಿ ತಲುಪಿದ್ದು ವಿಶೇಷವಾಗಿತ್ತು. ಇದು ವಿಜಯ್‌ ಹಜಾರೆ ಟ್ರೋಫಿಯ ಅತ್ಯಂತ ಯಶಸ್ವಿ ಚೇಸಿಂಗ್‌ ಎನಿಸಿಕೊಂಡಿದೆ.

Most Read

error: Content is protected !!