ಹೊಸದಿಗಂತ ವಿಜಯನಗರ:
ಹೊಸಪೇಟೆ ತಾಲೂಕಿನ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ಶುಕ್ರವಾರ ನೂರಾರು ಮೀನುಗಳು ಸಾವನ್ನಪ್ಪಿದ್ದು, ಮೀನುಗಾರರು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಒಂದು ವಾರದಿಂದ ಕೆರೆಯ ಮೇಲ್ಭಾಗದಲ್ಲಿ ಮಳೆಯಾಗುತ್ತಿದ್ದು, ಇತ್ತೀಚೆಗೆ ಕೆರೆ ತುಂಬಿ ಕೋಡಿ ಬಿದ್ದಿತ್ತು. ಈ ವೇಳೆ ಮಳೆ ನೀರಿನೊಂದಿಗೆ ಜಮೀನುಗಳಲ್ಲಿ ಯಥೇಚ್ಛವಾಗಿ ಬಳಕೆಯಾಗಿರುವ ರಸಾಯನಿಕ, ಕ್ರಿಮಿನಾಶಕ ಸಾರವೂ ಹರಿದು ಬಂದಿದ್ದರಿಂದ ಕೆರೆ ನೀರು ಕಲುಷಿತಗೊಂಡಿದೆ. ಇದೇ ಕಾರಣಕ್ಕೆ ನೂರಾರು ಮೀನುಗಳು ಜೀವ ಬಿಟ್ಟಿರುವ ಬಗ್ಗೆ ಮೀನುಗಾರರು ಶಂಕೆ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಮಲ್ಲೇಶ, ತಹಸೀಲ್ದಾರ್ ಶೃತಿ ಎಂ.ಎ., ಸಹಾಯಕ ನಿರ್ದೇಶಕ ಮಂಜುನಾಥ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಇಂತಹ ಘಟನೆ ಹಿಂದೆಯೂ ಸಂಭವಿಸಿದೆಯಾ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದರು. ಘಟನೆ ಕುರಿತು ಪರಾಮರ್ಶಿಸಿದ ಅಧಿಕಾರಿಗಳು, ಮೃತ ಪಟ್ಟಿರುವ ಮೀನು ಮತ್ತು ಕೆರೆಯ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮೀನುಗಾರಿಗೆ ಇಲಾಖೆ ಉಪನರ್ದೇಶಕ ಬಿ.ಮಲ್ಲೇಶ, ಕಮಲಾಪುರ ಕೆರೆಯಲ್ಲಿ ಸ್ಥಳೀಯ ಮೀನುಗಾರರ ಸಹಕಾರ ಸಂಘದಿಂದ ಮೀನುಗಾರಿಗೆ ನಡೆಸಲಾಗುತ್ತಿದೆ. ಭಾರೀ ಮಳೆಯಾದಾಗ ಮಳೆ ನೀರಿನೊಂದಿಗೆ ಮಣ್ಣೂ ಹರಿದು ಬರುವುದರಿಂದ ನೀರಿನ ಸಾಂಧ್ರತೆ ಹೆಚ್ಚುತ್ತದೆ. ಹೆಚ್ಚಾಗಿ ನೀರಿನ ಮೇಲ್ಭಾಗದಲ್ಲೇ ಇರುವ ವಿವಿಧ ತಳಿಯ ಮೀನುಗಳಿಗೆ ಉಸಿರಾಟದ ತೊಂದರೆಯಾಗಿ, ಸಾವನ್ನಪ್ಪುವ ಸಾಧ್ಯತೆಗಳಿರುತ್ತದೆ. ಸದ್ಯ ಕೆರೆಯಲ್ಲಿ ಕಾಟ್ಲಾ, ರೂವು, ಗೌರಿ ಮೀನು, ಮೃಗಾಲ್ ಮಿಟ್ಟಿದ್ದಾರೆ. ಈ ಪೈಕಿ ಕಾಟ್ಲಾ ಮೀನುಗಳು ಮಾತ್ರ ಮೃತಪಟ್ಟಿವೆ. ಆದರೂ, ಘಟನೆಯ ವೈಜ್ಞಾನಿಕ ಕಾರಣ ತಿಳಿಯಲು ಮೃತ ಮೃನಿನ ಮಾದರಿಯನ್ನು ಮಂಗಳೂರು ಹಾಗೂ ಕೆರೆಯ ನೀರಿನ ಮಾದರಿಯನ್ನು ಸ್ಥಳೀಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.