February 6, 2026
Friday, February 6, 2026
spot_img

ವಿಜಯಪುರ | ಕೊಲೆ ಕೇಸ್: ಆರೋಪಿಗಳಿಬ್ಬರಿಗೆ ಕಠಿಣ ಜೀವಾವಧಿ ಶಿಕ್ಷೆ

ಹೊಸದಿಗಂತ ವರದಿ, ವಿಜಯಪುರ:

ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿದ ಆರೋಪಿಗಳಿಬ್ಬರಿಗೆ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 5,70,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಗುಳಬಾಳದ ವಿಶ್ವರಾಜ ಶಿವಶರಣಪ್ಪ ಮದ್ದರಕಿ, ಶೇಖರಪ್ಪ ಭೀಮರಾಯ ನೆಲ್ಲಗಿ ಶಿಕ್ಷೆಗೊಳಗಾದ ಆರೋಪಿಗಳು.

ಗ್ರಾಮದ ಮಹಾಂತೇಶ ಬಿರಾದಾರ ಎಂಬವನು ಆರೋಪಿ ವಿಶ್ವರಾಜ ಮದ್ದರಕಿ ಎಂಬವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ಕಾರಣಕ್ಕಾಗಿ ಮಹಾಂತೇಶ ಬಿರಾದಾರ ಈತನನ್ನು ಆರೋಪಿಗಳಾದ ವಿಶ್ವರಾಜ ಮದ್ದರಕಿ, ಶೇಖರಪ್ಪ ನೆಲ್ಲಗಿ ಸೇರಿಕೊಂಡು ಗ್ರಾಮದಲ್ಲಿ ಜೂ.8, 2024 ರಂದು ಬಡಿಗೆಯಿಂದ ತಲೆಗೆ, ಮುಖ, ಕೈಗೆ ಹೊಡೆದು ಕೊಲೆ ಮಾಡಿರುವ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎ. ಮೋಹನ್ ಅವರು ವಾದ, ಪ್ರತಿವಾದವನ್ನು ಆಲಿಸಿ, ಆರೋಪಿ ವಿಶ್ವರಾಜ ಮದ್ದರಕಿ, ಶೇಖರಪ್ಪ ನೆಲ್ಲಗಿ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 5,70,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ 1 ನೇ ಅಧಿಕ ಸರ್ಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ಬಸವನಬಾಗೇವಾಡಿಯ ಸಿಪಿಐ ವಿಜಯ ಮುರಗುಂಡಿ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !