ಹೊಸದಿಗಂತ ವರದಿ ಪುತ್ತೂರು:
ಅನುಮತಿ ಪಡೆದುಕೊಳ್ಳದೇ ನಗರದಲ್ಲಿ ವಿಜಯೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರದ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಯಾಪು ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ ಬಳಿಕ ಪುತ್ತಿಲ ಪರಿವಾರ ನಗರದಲ್ಲಿ ವಿಜಯೋತ್ಸವ ಏರ್ಪಡಿಸಿತ್ತು.
ಈ ವಿಜಯೋತ್ಸವವನ್ನು ಪುತ್ತೂರಿನ ಮುಖ್ಯ ರಸ್ತೆಯುದ್ದಕ್ಕೂ ನಡೆಸಲಾಯಿತು. ಆದರೆ, ಪುತ್ತಿಲ ಪರಿವಾರ ಈ ವಿಜಯೋತ್ಸವ ಆಚರಣೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣವನ್ನು ಪುತ್ತೂರು ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಬುಧವಾರ ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಪುತ್ತೂರಿನ ಮಿನಿ ವಿಧಾನಸೌಧದಿಂದ ಮುಕ್ರಂಪಾಡಿಯ ವರೆಗೆ ಡಿಜೆ ಮೆರವಣಿಗೆ ಮೂಲಕ ಪುತ್ತಿಲ ಪರಿವಾರ ವಿಜಯೋತ್ಸವ ಆಚರಿಸಿತ್ತು.