ಹೊಸದಿಗಂತ ವರದಿ,ತುಮಕೂರು:
ಸಾರಿಗೆ ಸಂಸ್ಥೆ ಬಸ್‍ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಆಡಳಿತಾಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿ ಬಳಿ ನಡೆದಿದೆ.
ಗುಬ್ಬಿ ತಾಲ್ಲೂಕಿನ ಮೂಕನಾಯಕನಹಳ್ಳಿ ಗ್ರಾಮದ ನಿವಾಸಿ ಹಾಗೂ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿಯ ಪರ್ತಿಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಹೆಚ್. ಮಹೇಶ್(31) ಎಂಬುವರೇ ಮೃತಪಟ್ಟಿರುವ ದುರ್ದೈವಿ.
ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರು ಇಂದು ಬೆಳಗ್ಗೆ ತುಮಕೂರಿನಿಂದ ತಮ್ಮ ಸ್ವಗ್ರಾಮ ಮೂಕನಾಯಕನಹಳ್ಳ ಪಟ್ಟಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಗೊಲ್ಲಹಳ್ಳಿ ಸಮೀಪ ಸಾರಿಗೆ ಬಸ್ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರ ಪತ್ನಿಗೆ ಕಳೆದ 13 ದಿನಗಳ ಹಿಂದೆಯಷ್ಟೇ 2ನೇ ಮಗುವಿಗೆ ಜನ್ಮ ನೀಡಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರು ಪತ್ನಿ ಸಂಧ್ಯಾ, ಇಬ್ಬರು ಪುತ್ರಿಯರು ತಂದೆ-ತಾಯಿ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.