ಹೊಸದಿಗಂತ ವರದಿ,ಕೊಣನೂರು :
ಕಲ್ಲು ಗಣಿಗಾರಿಕೆಯಿಂದ ವಿಧ್ಯಾರ್ಥಿಗಳಿಗೆ ತೊಂದರೆ, ಮನೆಗೋಡೆಗಳ ಬಿರುಕು, ಆನೆಗಳ ದಾಳಿ, ಮತ್ತು ಕೃಷಿ ವಟುವಟಿಕೆ ಮೇಲೆ ದುಷ್ಪಾರಿಣಾಮ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಗಣಿಕಾರಿಕೆಗೆ ಅನುಮತಿ ನೀಡಬಾರದು ಎಂದು ಸುಳುಗೋಡು ಸೋಮವಾರ ಗ್ರಾಮಸ್ಥರು ಆಗ್ರಾಹಿಸಿದ್ದಾರೆ.
ಹೋಬಳಿ ವ್ಯಾಪ್ತಿಯ ಸುಳುಗೋಡು ಸೋಮವಾರ ಗ್ರಾಮದಲ್ಲಿ ಸುಮಾರು ೭೦ ಕ್ಕೂ ಹೆಚ್ಚು ಹೇಮಾವತಿ ಜಲಾಶಯ ನಿರಾಶ್ರಿತ ಕುಟುಂಬಗಳು ಸುಮಾರು ೪೫ ವರ್ಷಗಳಿಂದ ವಾಸವಿದ್ದು, ಮಂಜೂರಾದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಕಲ್ಲು ಮಂಟಿಯಲ್ಲಿ ಸುಮಾರು ೧೦-೧೫ ವರ್ಷಗಳಿಂದ ಹೊರಗಿನ ವ್ಯಕ್ತಿಗಳು ಗಣಿಗಾರಿಕೆ ಚಟುವಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಅರೇಳು ವರ್ಷಗಳ ಹಿಂದೆ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗೆ ಮನವಿ ನೀಡಿದ್ದರಿದ್ದ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಹೊರಗಿನ ವ್ಯಕ್ತಿಗಳು ಕಲ್ಲು ಗಣಿಗಾರಿಕೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಗ್ರಾ.ಪಂ ಸದಸ್ಯ ವೀಣಾಪ್ರಕಾಶ್ ಮನವಿ ಮಾಡಿದರು.
ಗ್ರಾಮಸ್ಥ ಯೋಗೇಶ್ ಮಾತನಾಡಿ, ಕಲ್ಲು ಮಂಟಿಯು ಹಾಸನ-ಕೊಡಗು ಗಡಿಯಲ್ಲಿದೆ. ಸಮೀಪದಲ್ಲೆ ಮೀಸಲು ಅರಣ್ಯ ಪ್ರದೇಶವು ಇದೆ. ಗಣಿಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಾಡನೆಗಳು ಯಾರಿಗೂ ತೊಂದರೆ ನೀಡದೆ ಸರಾಗವಾಗಿ ಸಂಚರಿಸುತ್ತಿವೆ. ಮಂಟಿಯಲ್ಲಿ ಪುರಾತನ ಕಾಲದ ಗುಹೆ ಇದೆ. ಇದು ಆದಿಮಾನವರ ಕಾಲದ ಶಿಲೆಗಳು ಹಾಗೂ ಶಿಲಾ ಕೆತ್ತನೆಗಳನ್ನು ಒಳಗೊಂಡಿದ್ದು, ಒಂದು ಸಾವಿರ ವರ್ಷಗಳ ಹಿಂದೆ ಅಳ್ವಿಕೆ ನಡೆಸುತ್ತಿದ್ದ ಕೊಂಗಾಳ್ವ ಅರಸರ ಕಾಲದ ಶಿಲಾ ಶಾಸನಗಳು ಹಾಗೂ ಕಲ್ಲಿನ ಭವ್ಯ ಕೆತ್ತನೆಗಳು ಪತ್ತೆಯಾಗಿವೆ. ಮತ್ತೆ ಗಣಿಗಾರಿಕೆ ನಡೆಸಿದರೆ ಐತಿಹಾಸಿಕ ರಚನೆಗಳಿಗೆ ಹಾನಿ, ಕಾಡನೆ ಸಮಸ್ಯೆ ಉದ್ಭವವಾಗಲಿದೆ ಎಂದು ಅಳಲು ತೊಡಿಕೊಂಡರು.