ಹೊಸದಿಗಂತ ಡಿಜಿಟಲ್ ಡೆಸ್ಕ್;
ಒಲಿಂಪಿಕ್ಸ್ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿದ್ದ ಮನವಿಯ ವಿಚಾರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS) ಶುಕ್ರವಾರವೇ ಮುಕ್ತಾಯಗೊಳಿಸಿದೆ. ಇದೀಗ ಅಂತಿಮ ತೀರ್ಪು ಇಂದು ರಾತ್ರಿ 9.30ಕ್ಕೆ ಪ್ರಕಟಗೊಳ್ಳಲಿದೆ.
ತಮ್ಮ ಪರ ಸಕಾರತ್ಮಕ ತೀರ್ಪು ವಿಶ್ವಾಸವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ವ್ಯಕ್ತಪಡಿಸಿದೆ. ಹರೀಶ್ ಸಾಳ್ವೆ ಅವರು ಸತತ ಒಂದು ಗಂಟೆಗಳ ಕಾಲ ವಾದ ಮಂಡಿಸಿದ್ದರು.
ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್ ಅವರು ಶುಕ್ರವಾರ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ. ಪ್ಯಾರಿಸ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು.