ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರ್ಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹರ್ಯಾಣ ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ದಾಟಿ 48 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಕ್ಟೋಬರ್ 5 ರಂದು ನಡೆದ ಹರ್ಯಾಣ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.
ಒಲಿಂಪಿಯನ್ ವಿನೇಶಾ, ಬಿಜೆಪಿಯ ಕ್ಯಾಪ್ಟನ್ ಯೋಗೇಶ್ ಬೈರಾಗಿ, ಆಪ್ ಟಿಕೆಟ್ ನಲ್ಲಿ ಸ್ಪರ್ಧಿಸಿದ ಮಾಜಿ ವೃತ್ತಿಪರ ಕುಸ್ತಿಪಟು ಕವಿತಾ ದಲಾಲ್ ಅವರನ್ನು ಪರಾಭವಗೊಳಿಸಿದ್ದಾರೆ. ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಅನರ್ಹಗೊಂಡು ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್, ಸೆಪ್ಟೆಂಬರ್ 6 ರಂದು ಕಾಂಗ್ರೆಸ್‌ಗೆ ಸೇರಿದರು. ಕೆಲವೇ ಗಂಟೆಗಳ ನಂತರ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿತ್ತು. “ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ನಾವು ಎದುರಿಸಬೇಕಾಗಿ ಬಂದಿದ್ದನ್ನು ಕ್ರೀಡಾಪಟುಗಳು ಎದುರಿಸಬೇಕಾಗಿಲ್ಲ ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.