Saturday, January 24, 2026
Saturday, January 24, 2026
spot_img

ಮೈದಾನಕ್ಕಿಳಿಯಲು ಸಜ್ಜಾದ ‘ವಿಂಟೇಜ್’ ಧೋನಿ: 19ನೇ ಸೀಸನ್‌ಗೆ ಮಾಸ್ಟರ್ ಪ್ಲಾನ್ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಸಂಭ್ರಮಕ್ಕೆ ಇಡೀ ದೇಶವೇ ಕೌಂಟ್‌ಡೌನ್ ಶುರುಮಾಡಿದೆ. ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ ಈ ‘ಮಿಲಿಯನ್ ಡಾಲರ್’ ಟೂರ್ನಿಗಾಗಿ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿದ್ದು, ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ವಿಶೇಷವೆಂದರೆ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್‌ಕೆ ಆಧಾರಸ್ತಂಭ ಎಂಎಸ್ ಧೋನಿ ಈಗಾಗಲೇ ತಮ್ಮ ತವರು ರಾಂಚಿಯಲ್ಲಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.

ಸಿಎಸ್‌ಕೆ ಫ್ರಾಂಚೈಸಿ ಇತ್ತೀಚೆಗೆ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಧೋನಿ ತಮ್ಮ ಎಂದಿನ ಶೈಲಿಯಲ್ಲಿ ತಯಾರಾಗುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಹಳದಿ ಬಣ್ಣದ ಪ್ಯಾಡ್‌ಗಳನ್ನು ಧರಿಸಿ ಧೋನಿ ಬ್ಯಾಟಿಂಗ್ ಅಭ್ಯಾಸಕ್ಕೆ ಇಳಿದಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ. ಈ ವೇಳೆ ಜಾರ್ಖಂಡ್ ಕ್ರಿಕೆಟ್‌ನ ಅವರ ಮಾಜಿ ಸಹ ಆಟಗಾರ ಸೌರಭ್ ತಿವಾರಿ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಕಳೆದ ಕೆಲವು ಆವೃತ್ತಿಗಳಿಂದಲೂ ಧೋನಿ ಅವರ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. “ಇದೇ ಕೊನೆಯ ಐಪಿಎಲ್” ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಧೋನಿ ಮಾತ್ರ ಪ್ರತಿ ಬಾರಿ ಮೈದಾನಕ್ಕಿಳಿದು ತಮ್ಮಲ್ಲಿ ಇನ್ನೂ ಆಟ ಬಾಕಿ ಇದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಈ ಬಾರಿಯೂ ಧೋನಿ ಯುವ ಪಡೆಯನ್ನು ಮುನ್ನಡೆಸಲು ಅಥವಾ ತಂಡಕ್ಕೆ ಮಾರ್ಗದರ್ಶನ ನೀಡಲು ಸಂಪೂರ್ಣ ಸಜ್ಜಾಗಿದ್ದಾರೆ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಐಪಿಎಲ್‌ನ 19ನೇ ಸೀಸನ್‌ ಮಾರ್ಚ್ 26 ರಿಂದ ಮೇ 31 ರವರೆಗೆ ನಡೆಯುವ ಸಾಧ್ಯತೆಯಿದೆ. ಅಧಿಕೃತ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗದಿದ್ದರೂ, ಧೋನಿ ಅವರ ಅಭ್ಯಾಸದ ವೀಡಿಯೊ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Must Read