ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಂವಿಧಾನದ ಕುರಿತು ಸುಳ್ಳು ಹರಡುತ್ತಿದ್ದಾರೆ, ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ (BJP) ನಿಯೋಗವು ಸೋಮವಾರ (ನ.11) ಮುಖ್ಯ ಚುನಾವಣಾಧಿಕಾರಿಗಳನ್ನ ಭೇಟಿಯಾಗಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಲಾಗಿದ್ದು, ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಳಿಸುವಂತೆ ಆಗ್ರಹಿಸಿದೆ.
ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ನಿಯೋಗವು ಇಂದು ಮುಖ್ಯ ಚುನಾವಣಾ ಆಯುಕ್ತರನ್ನ ಭೇಟಿ ಮಾಡಿ, ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದೇವೆ. ಮಹಾರಾಷ್ಟ್ರ ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಹುಲ್ ಗಾಂಧಿ ಸುಳ್ಳುಗಳನ್ನೇ ಹರಡುತ್ತಿದ್ದಾರೆ ಎಂಬುದನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ.
ನವೆಂಬರ್ 6 ರಂದು ಮುಂಬೈನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಮಹಾರಾಷ್ಟ್ರದ ವೆಚ್ಚದಲ್ಲಿ ಇತರ ರಾಜ್ಯಗಳಲ್ಲಿ ಆಪಲ್ ಐಫೋನ್‌ಗಳು ಮತ್ತು ಬೋಯಿಂಗ್ ವಿಮಾನಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರ ಸಂಬಂಧ ಸಹ ಬಿಜೆಪಿ ದೂರು ನೀಡಿತ್ತು. ಅದೇ ಸಭೆಯಲ್ಲಿ ರಾಹುಲ್ ʻಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಜೊತೆಗೆ ಸೇರಿ ಸಂವಿಧಾನ ನಾಶಮಾಡಲು ಬಯಸಿದೆʼ ಎಂದು ಆರೋಪಿಸಿದ್ದರು. ಈ ಸಂಬಂಧ ಇಂದು ಬಿಜೆಪಿ ನಿಯೋಗ ದೂರು ನೀಡಿದೆ.