ಹೊಸದಿಗಂತ ಮಡಿಕೇರಿ:
ದಸರಾ ಜನೋತ್ಸವದ ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ ಮಾಡಿದ ಆರೋಪದಡಿ ಹತ್ತು ಮಂಟಪ ಸಮಿತಿಯವರು ಹಾಗೂ 62 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಚ್ಛ ನ್ಯಾಯಾಲಯದ ಆದೇಶದ ನಡುವೆಯೂ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸಿದ ಹಿನ್ನೆಲೆಯ ಮಡಿಕೇರಿಯ 10 ಮಂಟಪ ಸಮಿತಿಗಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 10 ಗಂಟೆ ನಂತರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಧ್ವನಿವರ್ಧಕವನ್ನು ಬಳಸಬಾರದೆಂಬ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಅ.2ರಂದು ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಸಲಾಗಿದೆ ಎಂದು ಪೊಲೀಸರು ನೀಡಿದ ಸ್ವಯಂ ಪ್ರೇರಿತ ದೂರಿನಡಿ 10 ಮಂಟಪ ಸಮಿತಿಗಳ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.
62 ಮಂದಿ ವಿರುದ್ಧ ಎಫ್‌ಐಆರ್:
ನಗರದ 10 ಮಂಟಪಗಳ ಪದಾಧಿಕಾರಿಗಳು ಸೇರಿದಂತೆ ಧ್ವನಿವರ್ಧಕ ಮಾಲಕರುಗಳ ಸಹಿತ ಒಟ್ಟು 62 ಮಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ರಾತ್ರಿ 10ರ ನಂತರ ಧ್ವನಿವರ್ಧಕ ಬಳಸದಂತೆ ಪೂರ್ವಭಾವಿ ಸಭೆಗಳನ್ನು ನಡೆಸಿ ಎಚ್ಚರಿಕೆ ನೀಡಿದ್ದರೂ ಧ್ವನಿವರ್ಧಕ ಬಳಸಲಾಗಿದೆ. ಇದನ್ನು ಸ್ಥಗಿತಗೊಳಿಸುವಂತೆ ನೀಡಿದ ಸೂಚನೆಯನ್ನೂ ಪಾಲಿಸದೆ ಆದೇಶ ಉಲ್ಲಂಘನೆಯೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಲಾಗಿದೆ ಈ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೇಟೆ ಶ್ರೀರಾಮಮಂದಿರ, ದೇಚೂರು ಶ್ರೀರಾಮ ಮಂದಿರ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋದಂಡ ರಾಮ ದೇವಾಲಯ ಮಂಟಪ ಸಮಿತಿಗಳ ತಲಾ 6 ಮಂದಿ ಕರವಲೆ ಭಗವತಿ, ಕೋಟೆ ಮಾರಿಯಮ್ಮ ಮಂಟಪ ಸಮಿತಿಗಳ ತಲಾ 7 ಮಂದಿ, ಕೋಟೆ ಗಣಪತಿಯ 8 ಮಂದಿ, ಚೌಡೇಶ್ವರಿ ಹಾಗೂ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿಯ ತಲಾ 5 ಮಂದಿ ವಿರುದ್ಧ ಇದೀಗ ಸೆಕ್ಷನ್ 37, 109, ಬಿಎನ್ಎಸ್ 292 ಅಡಿ ಪ್ರಕರಣಗಳು ದಾಖಲಾಗಿವೆ.
ಗೋಣಿಕೊಪ್ಪದಲ್ಲೂ ಪ್ರಕರಣ ದಾಖಲು: ಗೋಣಿಕೊಪ್ಪ ದಸರಾದಲ್ಲೂ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಧ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ನಾಲ್ಕು ಸಮಿತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರುವತ್ತೊಕ್ಲುವಿನ ಶಾರದಾಂಬ ದಸರಾ ಸಮಿತಿ, ಕಾಫಿ ಬೋರ್ಡ್’ನ ಕಾಡ್ಲಯ್ಯಪ್ಪ ದಸರಾ ಸಮಿತಿ, ಕೊಪ್ಪ ಸ್ನೇಹಿತರ ಬಳಗ ಹಾಗೂ ಮೂರನೇ ವಿಭಾಗದ ಯುವ ದಸರಾ ಸಮಿತಿ ಅಧ್ಯಕ್ಷರುಗಳ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.