ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಗೆ ನಾಲ್ಕು ಶೋಕಾಸ್ ನೊಟೀಸ್ ಗಳನ್ನು ಜಾರಿ ಮಾಡಿದೆ.
ವಿಮಾನಯಾನ ಸಂಸ್ಥೆಯು ಸ್ವಯಂಪ್ರೇರಣೆಯಿಂದ ಕೆಲವು ಮಾಹಿತಿಯನ್ನು ಡಿಜಿಸಿಎ ಜೊತೆಗೆ ಹಂಚಿಕೊಂಡ ಒಂದು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.
ಜೂನ್ 20 ಮತ್ತು 21 ರಂದು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ವಿಮಾನಯಾನ ಸಂಸ್ಥೆಯು ಸ್ವಯಂಪ್ರೇರಿತವಾಗಿ ನೀಡಿದ ಕೆಲವು ಮಾಹಿತಿಗಳ ಆಧಾರದ ಮೇಲೆ ಜುಲೈ 23 ರಂದು ಶೋಕಾಸ್ ನೊಟೀಸ್ ಗಳನ್ನು ನೀಡಲಾಗಿದೆ ಎಂದು ತಿಳಿಸಿವೆ.
ಕಳೆದ ಒಂದು ವರ್ಷದಿಂದ ಏರ್ ಇಂಡಿಯಾ ಹಂಚಿಕೊಂಡ ಕೆಲವು ಸ್ವಯಂಪ್ರೇರಿತ ಮಾಹಿತಿಗಳಿಗೆ ಸಂಬಂಧಿಸಿದ ಈ ನೊಟೀಸ್ ಗಳನ್ನು ಡಿಜಿಸಿಎ ಇಂದ ನೊಟೀಸ್ ಗಳನ್ನು ಸ್ವೀಕರಿಸಲಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ನಿಗದಿತ ಅವಧಿಯೊಳಗೆ ನಾವು ಈ ನೊಟೀಸ್ ಗಳಿಗೆ ಪ್ರತಿಕ್ರಿಯಿಸುತ್ತೇವೆ. ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ನಾವು ಬದ್ಧರಾಗಿರುತ್ತೇವೆ’ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನೊಟೀಸ್ ಗಳು ಕ್ಯಾಬಿನ್ ಸಿಬ್ಬಂದಿ ಕರ್ತವ್ಯ ಮತ್ತು ವಿಶ್ರಾಂತಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿವೆ. ಕನಿಷ್ಠ ನಾಲ್ಕು ಅಲ್ಟ್ರಾ-ಲಾಂಗ್-ಹಲ್ ವಿಮಾನಗಳ ಕಾರ್ಯಾಚರಣೆ ಸಮಯದಲ್ಲಿ ಉಲ್ಲಂಘನೆಗಳು ಸಂಭವಿಸಿವೆ. ಏಪ್ರಿಲ್ 27 ರಂದು ಎರಡು ವಿಮಾನಗಳು, ಏಪ್ರಿಲ್ 28 ಮತ್ತು ಮೇ 2 ರಂದು ತಲಾ ಒಂದು ವಿಮಾನಗಳ ಕಾರ್ಯಾಚರಣೆ ವೇಳೆ ಸಂಭವಿಸಿವೆ.
2024ರ ಜುಲೈ 26, 2024ರ ಅಕ್ಟೋಬರ್ 9 ಮತ್ತು 2025ರ ಏಪ್ರಿಲ್ 22 ರಂದು ಕಾರ್ಯನಿರ್ವಹಿಸಿದ ವಿಮಾನಗಳು ಸೇರಿದಂತೆ ಕನಿಷ್ಠ ನಾಲ್ಕು ವಿಮಾನಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ತರಬೇತಿ ಮತ್ತು ಕಾರ್ಯಾಚರಣೆಯ ಕಾರ್ಯವಿಧಾನದಲ್ಲಿ ಉಲ್ಲಂಘನೆಗಳು ನಡೆದಿವೆ.
ಮತ್ತೊಂದು ಶೋಕಾಸ್ ನೊಟೀಸ್ ಜೂನ್ 21 ರಂದು ವಿಮಾನಯಾನ ಸಂಸ್ಥೆ ಮಾಡಿದ ಸ್ವಯಂಪ್ರೇರಿತ ಮಾಹಿತಿ ಬಹಿರಂಗಪಡಿಸುವಿಕೆಗಳನ್ನು ಆಧರಿಸಿದೆ. ಇದು ಕ್ಯಾಬಿನ್ ಸಿಬ್ಬಂದಿ ತರಬೇತಿ ಮತ್ತು ಕಾರ್ಯಾಚರಣಾ ಕಾರ್ಯವಿಧಾನಗಳು ಸೇರಿದಂತೆ ಮೂರು ನಿರ್ದಿಷ್ಟ ಉಲ್ಲಂಘನೆಗಳಿಗೆ ಸಂಬಂಧಿಸಿದೆ. ಏಪ್ರಿಲ್ 10-11, ಫೆಬ್ರುವರಿ 16-ಮೇ 19 ಮತ್ತು ಡಿಸೆಂಬರ್ 1, 2024 ರಂದು ಕಾರ್ಯನಿರ್ವಹಿಸಿದ ಕೆಲವು ವಿಮಾನಗಳಲ್ಲಿ ಈ ಉಲ್ಲಂಘನೆಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.