ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ, ಹಿಂಸಾಚಾರ ಭುಗಿಲೆದ್ದಿದ್ದು, 72 ಮಂದಿ ಸಾವಿಗೀಡಾಗಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಕರೆ ನೀಡಿದ ಹತ್ತಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಸ್ಟನ್ ಗ್ರೆನೇಡ್‌ಗಳನ್ನು ಬಳಸಿದ್ದಾರೆ.
ಭಾನುವಾರ ಸಂಜೆ 6 ಗಂಟೆಗೆ ಪ್ರಾರಂಭವಾದ ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ಅನ್ನು ಸರ್ಕಾರ ಘೋಷಿಸಿತು. ರಾಜಧಾನಿಯ ಹೊರತಾಗಿ ಪ್ರತಿಭಟನಾಕಾರರು ಪ್ರಮುಖ ಹೆದ್ದಾರಿಗಳನ್ನು ನಿರ್ಬಂಧಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಬಾಂಗ್ಲಾ ಸಂಘರ್ಷದಿಂದಾಗಿ ದೇಶದಲ್ಲಿರುವ ಭಾರತೀಯರು ಆತಂಕಗೊಂಡಿದ್ದಾರೆ. ಬಾಂಗ್ಲಾದಲ್ಲಿರುವ ತನ್ನ ನಾಗರಿಕರಿಗೆ ಸಂಪರ್ಕದಲ್ಲಿ ಇರುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿದೆ.
ಭಾರತದ ಸಹಾಯಕ ಹೈ ಕಮಿಷನ್, ಸಿಲ್ಹೆಟ್‌ನ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ. ಜೊತೆಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ +88-01313076402 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕೆಲವೇ ದಿನಗಳ ಹಿಂದೆ, 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.