ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಮತ್ತು ವೀಸಾ ಅರ್ಜಿ ಕೇಂದ್ರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಢಾಕಾದ ಉಪಶಹರ್ ಪ್ರದೇಶದಲ್ಲಿರುವ ಸಹಾಯಕ ಹೈಕಮಿಷನ್ ಕಚೇರಿ, ಅದೇ ಪ್ರದೇಶದಲ್ಲಿರುವ ಸಹಾಯಕ ಹೈಕಮಿಷನರ್ ನಿವಾಸ ಮತ್ತು ಶೋಭಾನಿಘಾಟ್ ಪ್ರದೇಶದಲ್ಲಿರುವ ವೀಸಾ ಅರ್ಜಿ ಕೇಂದ್ರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಹಾದಿ ಮೃತಪಟ್ಟ ಬಳಿಕ, ಇಂಕಿಲಾಬ್ ಮಂಚಾದ ವಕ್ತಾರ ಗೋನೊ ಓಧಿಕಾರ್, ಸಹಾಯಕ ಹೈಕಮಿಷನ್ ಕಚೇರಿಯನ್ನು ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದರು. ಹೀಗಾಗಿ ರಾತ್ರಿಯಿಡೀ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ ಯಾರೂ ಕೂಡ ಹಿಂಸಾಚಾರ ಮಾಡದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಕಾರಣರಾದ ಪ್ರಮುಖ ನಾಯಕ ಮತ್ತು ಪ್ರಮುಖ ವ್ಯಕ್ತಿ ಷರೀಫ್ ಉಸ್ಮಾನ್ ಹಾದಿ. ಮುಂದಿನ ವರ್ಷ ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಅವರು ಅಭ್ಯರ್ಥಿಯಾಗಿದ್ದರು.
ಡಿಸೆಂಬರ್ 12 ರಂದು ಕೇಂದ್ರ ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸುಕುಧಾರಿ ಬಂದೂಕುಧಾರಿಗಳು ಹಾದಿ ಅವರ ಮೇಲೆ ಗುಂಡು ಹಾರಿಸಿದ್ದರು. ಅವರನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಹೀಗಾಗಿ ಅವರ ನಿಧನದ ನಂತರ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿತು.
ಗುರುವಾರ ಚಟ್ಟೋಗ್ರಾಮ್‌ನಲ್ಲಿರುವ ಸಹಾಯಕ ಭಾರತೀಯ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ತೂರಾಟ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ.

