ಹೊಸದಿಗಂತ ವರದಿ, ಮಂಗಳೂರು:
ನಗರದ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ಎಸ್‌ಡಿಪಿಐ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಲವು ಮಂದಿ ಪುಂಡರು ವಾಪಾಸ್ ತೆರಳುವ ವೇಳೆ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಅವರ ಮೇಲೆ ವಾಹನ ಹತ್ತಿಸಲು ಯತ್ನಿಸಿದ ಕುರಿತಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾವೇಶದಲ್ಲಿ ಪಾಲ್ಗೊಂಡ ಕೆಲವು ಮಂದಿ ಸಮಾವೇಶ ಮುಗಿಸಿ ಬೈಕ್, ಸ್ಕೂಟರ್ ಮತ್ತು ಕಾರಿನಲ್ಲಿ ತೆರಳುತ್ತಿದ್ದಾಗ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಪೊಲೀಸ್ ಸಿಬ್ಬಂದಿಗ ಸಂಗನ ಗೌಡ ಎಂಬವರ ಮೇಲೆ ವಾಹನ ಹತ್ತಿಸಲು ಯತ್ನಿಸಿದ್ದರು. ಅಲ್ಲದೆ ಪೊಲೀಸರ ವಿರುದ್ಧ ಬ್ಯಾರಿ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿ ಘೋಷಣೆ ಕೂಗಿದ್ದರು. ಈ ಕುರಿತ ವಿಡಿಯೋ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಎಎಸ್‌ಐ ಚಂದ್ರಶೇಖರ ಅವರು ಠಾಣೆಗೆ ದೂರು ಸಲ್ಲಿಸಿದ್ದಾರೆ. ಇಬ್ಬರು ಕೆಟಿಎಂ ಬೈಕ್ ಸವಾರರು ಹಾಗೂ ಸ್ಕೂಟರ್ ಸವಾರರು, ಕಾರು ಚಾಲಕ ಮತ್ತು ಇತರರ ವಿರುದ್ಧ ಸೆಕ್ಷನ್ ೧೪೩, ೩೫೩, ೫೦೪ ಮತ್ತು ೧೪೯ರಡಿ ಕೇಸು ದಾಖಲಿಸಲಾಗಿದೆ. ನಿಂದನೆ ಮಾಡಿದವರ ಕೈಯಲ್ಲಿ ಎಸ್‌ಡಿಪಿಐ ಪಕ್ಷದ ಧ್ವಜ ಕಂಡುಬಂದಿದ್ದು, ಈ ಕೃತ್ಯದ ವಿಡಿಯೋ ವೈರಲ್ ಆಗಿದೆ.