ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರದ ದಾಲ್ ಸರೋವರದ ಶಾಂತ ನೀರಿನ ಮಧ್ಯೆ ನಡೆದ ಒಂದು ಸರಳ ಸಂಭಾಷಣೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ. ಯಾವುದೇ ಗದ್ದಲ, ವಿವಾದ ಅಥವಾ ಆಕ್ರೋಶವಿಲ್ಲದೆ, ಕೇವಲ ಹಾಸ್ಯ ಮತ್ತು ಸಮಯೋಚಿತ ಮಾತಿನ ಮೂಲಕ ನೀಡಲಾದ ಉತ್ತರವೇ ಈ ವಿಡಿಯೋವನ್ನು ವೈರಲ್ ಮಾಡಿದೆ.
X ಪ್ಲಾಟ್‌ಫಾರ್ಮ್‌ನಲ್ಲಿ @lakshaymehta08 ಹಂಚಿಕೊಂಡಿರುವ ಈ ಕ್ಲಿಪ್‌ನಲ್ಲಿ, ಕಾಶ್ಮೀರಿ ಶಿಕಾರಾ ದೋಣಿ ಚಾಲಕನೊಬ್ಬ ಪ್ರವಾಸಿಗರೊಂದಿಗೆ ಮಾತನಾಡುತ್ತಿರುವ ದೃಶ್ಯವಿದೆ. ಸಂಭಾಷಣೆಯ ವೇಳೆ ದೋಣಿ ಚಾಲಕ, ಪ್ರವಾಸಿಗನನ್ನು “ನೀವು ಎಲ್ಲಿಂದ ಬಂದವರು?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರವಾಸಿ “ಭಾರತ” ಎಂದು ಉತ್ತರಿಸುತ್ತಾನೆ. ಕ್ಷಣವೂ ತಡಮಾಡದೆ, ನಗುತ್ತಲೇ ದೋಣಿ ಚಾಲಕ “ಅಂದರೆ ನಾನು ಪಾಕಿಸ್ತಾನದವನಾ?” ಎಂದು ನಗುತ್ತಾ ಕೇಳಿ, ತಕ್ಷಣವೇ “ನಾವು ಕೂಡ ಭಾರತೀಯರೇ” ಎಂದು ಹೇಳುತ್ತಾನೆ.
ಕೆಲವೇ ಕ್ಷಣಗಳ ಈ ಮಾತುಕತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದರಲ್ಲಿ ಕೋಪವೂ ಇಲ್ಲ, ಉಪದೇಶವೂ ಇಲ್ಲ; ಹಾಸ್ಯಮಯ ಶೈಲಿಯಲ್ಲಿ ನೀಡಿದ ಸ್ಪಷ್ಟ ಸಂದೇಶ ಮಾತ್ರ. ಅನೇಕ ನೆಟ್ಟಿಗರು ಈ ವಿಡಿಯೋವನ್ನು ‘ಸಿಂಪಲ್ ಆದರೆ ಸ್ಟ್ರಾಂಗ್ ಆದ ದೇಶಭಕ್ತಿ’ ಎಂದು ಕರೆದಿದ್ದಾರೆ. ವಾದಕ್ಕೆ ಹೋಗದೆ, ಹಾಸ್ಯದ ಮೂಲಕ ವಿಚಾರ ಹೇಳಿದ ರೀತಿಗೆ ಶಿಕಾರಾ ಚಾಲಕನಿಗೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರವಾಸೋದ್ಯಮ ಪುನಶ್ಚೇತನಗೊಳ್ಳುತ್ತಿರುವ ಕಾಶ್ಮೀರದಲ್ಲಿ, ದಾಲ್ ಸರೋವರ ಮತ್ತೊಮ್ಮೆ ಪ್ರವಾಸಿಗರಿಂದ ಕಳೆಗಟ್ಟುತ್ತಿರುವ ಹೊತ್ತಿನಲ್ಲಿ ಈ ವೀಡಿಯೊ ಹೊರಬಂದಿದೆ. ಇದು ಕಾಶ್ಮೀರದ ಸಾಮಾನ್ಯ ಜನರ ಮನಸ್ಥಿತಿ, ಆತ್ಮೀಯತೆ ಸ್ವಭಾವವನ್ನು ಪ್ರತಿಬಿಂಬಿಸುವ ಕ್ಷಣವಾಗಿ ಈಗ ಎಲ್ಲರ ಮನಸೆಳೆಯುತ್ತಿದೆ.


