ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಟುಂಬಿಕ ನ್ಯಾಯಾಲಯವೊಂದು ಇತ್ತೀಚೆಗೆ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ವಿಚ್ಛೇದನ ಪಡೆದ ದಂಪತಿಗಳ ನಡುವೆ ಆಸ್ತಿ ವಿಚಾರವಾಗಿ ನಡೆದ ಜಗಳ ಬೀದಿಗೆ ಬಂದಿದ್ದು, ಮಹಿಳೆಯೊಬ್ಬಳು ತನ್ನ ಮಾಜಿ ಪತಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ವರದಿಗಳ ಪ್ರಕಾರ, ಈ ದಂಪತಿಗೆ ಈಗಾಗಲೇ ಕಾನೂನುಬದ್ಧವಾಗಿ ವಿಚ್ಛೇದನ ದೊರೆತಿತ್ತು. ಮಹಿಳೆಯು ತನಗೆ ಜೀವನಾಂಶ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಳು. ಆದರೆ, ತಾಂತ್ರಿಕ ಕಾರಣಗಳಿಂದ ನ್ಯಾಯಾಲಯವು ಅವಳ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದೇ ವೇಳೆ, ಪತಿಯು ತನ್ನ ಹೆಸರಿನಲ್ಲಿದ್ದ ಸಮಸ್ತ ಆಸ್ತಿಯನ್ನು ತನ್ನ ತಾಯಿಯ ಹೆಸರಿಗೆ ವರ್ಗಾಯಿಸಿದ್ದ ಎನ್ನಲಾಗಿದೆ.
ತನಗೆ ಬರಬೇಕಾದ ಆಸ್ತಿ ಅತ್ತೆಯ ಪಾಲಾಗಿದ್ದನ್ನು ಕಂಡು ಆಕ್ರೋಶಗೊಂಡ ಮಹಿಳೆ, ನ್ಯಾಯಾಲಯದ ಆವರಣದಲ್ಲೇ ಪತಿಯ ಕಾಲರ್ ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ವಿಶೇಷವೆಂದರೆ, ಪತ್ನಿ ಇಷ್ಟೊಂದು ಉಗ್ರವಾಗಿ ವರ್ತಿಸುತ್ತಿದ್ದರೂ, ಪತಿ ಮಾತ್ರ ಯಾವುದೇ ಪ್ರತಿರೋಧ ತೋರದೆ ನಗುತ್ತಲೇ ನಿಂತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆತನ ಈ ವಿಚಿತ್ರ ಪ್ರತಿಕ್ರಿಯೆ ಮತ್ತು ಮಹಿಳೆಯ ಆಕ್ರೋಶ ಈಗ ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ವಿಡಿಯೋ ಮಾತ್ರ ಎಲ್ಲೆಡೆ ಹರಿದಾಡುತ್ತಿದೆ.

