ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್‌ನ ಭಾರತ ಪ್ರವಾಸದ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ಹಂತಕ್ಕೆ ತಲುಪಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯ್ ಹೋಪ್ ಅವರ ಶತಕದ ಹೊರತಾಗಿಯೂ, ಶುಭ್ಮನ್ ಗಿಲ್ ನಾಯಕತ್ವದ ಭಾರತ ತಂಡ ಗೆಲುವು ಸಾಧಿಸುವುದು ಬಹುತೇಕ ನಿಶ್ಚಿತವಾಗಿದೆ. ಮೈದಾನದಲ್ಲಿ ಎರಡು ತಂಡಗಳ ನಡುವೆ ತೀವ್ರ ಹೋರಾಟ ನಡೆಯುತ್ತಿದ್ದರೂ, ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದು ಸ್ಟೇಡಿಯಂನಲ್ಲಿ ಕುಳಿತಿದ್ದ ಒಂದು ಜೋಡಿಯ ವಿಡಿಯೋ.
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 293 ರನ್ ಗಳಿಸಿ ಆಡುತ್ತಿದ್ದಾಗ, ಕ್ಯಾಮರಾಮನ್ ದೃಷ್ಟಿ ಗ್ಯಾಲರಿಯಲ್ಲಿ ಕುಳಿತಿದ್ದ ಒಂದು ಪ್ರೇಮಿಗಳ ಜೋಡಿಯ ಕಡೆಗೆ ತಿರುಗಿತು. ಇಬ್ಬರ ನಡುವಿನ ಕ್ಯೂಟ್ ಜಗಳವನ್ನು ಲೈವ್ ಕ್ಯಾಮರಾ ಸೆರೆ ಹಿಡಿಯಿತು.
ಯುವಕ ನಗುತ್ತಲೇ ಏನೋ ಒಂದು ವಿಷಯವನ್ನು ಯುವತಿಗೆ ಹೇಳುತ್ತಾನೆ. ಇದರಿಂದ ಕೋಪಗೊಂಡ ಆಕೆ, ಆತನ ಮುಖಕ್ಕೆ ಒಂದು ಏಟು ಕೊಡುತ್ತಾಳೆ. ಯುವಕ ನಗುವುದನ್ನು ಮುಂದುವರೆಸಿದಾಗ, ಅವಳು ಮತ್ತೊಂದು ಕಪಾಳಮೋಕ್ಷ ಮಾಡುತ್ತಾಳೆ. ನಗು ತಡೆಯಲಾಗದೇ ನಗುತ್ತಿರುವ ಯುವಕನಿಗೆ ಮತ್ತೊಂದು ಬಾರಿಸಿ, ಆತನ ಕುತ್ತಿಗೆಯನ್ನು ಹಿಡಿದು ಕೈಬೆರಳಿನಿಂದ “ಅಲ್ಲಿ ನೋಡು” ಎಂದು ಸೂಚಿಸುತ್ತಾಳೆ. ಆದರೆ, ಈ ಜೋಡಿ ಏಕೆ ಜಗಳವಾಡಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು “ಅವನು ಏನು ಹೇಳಿರಬಹುದು?” ಎಂದು ಪ್ರಶ್ನಿಸುತ್ತಾ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹೀಗೆ ಇವರಿಬ್ಬರ ನಡುವೆ ಕ್ಯೂಟ್ ಜಗಳ ಮುಂದುವರಿದಾಗ, ಕ್ಯಾಮರಾವನ್ನು ಮತ್ತೆ ಬ್ಯಾಟ್ಸ್‌ಮನ್‌ನ ಕಡೆಗೆ ತಿರುಗಿಸಲಾಯಿತು. ಆದರೆ, ಆ ಯುವಕ ಏನು ಹೇಳಿದ? ಎಂಬ ಪ್ರಶ್ನೆ ಮಾತ್ರ ಕ್ರಿಕೆಟ್ ಅಭಿಮಾನಿಗಳಲ್ಲಿ ಉಳಿದಿದೆ.

