ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ನಡೆದ ಅಸಾಮಾನ್ಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹನುಮಾನ್ ದೇವಾಲಯದಲ್ಲಿ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕಿದ ನಾಯಿಯೊಂದು ಇದೀಗ ಗ್ರಾಮಸ್ಥರ ದೃಷ್ಟಿಯಲ್ಲಿ ‘ಪವಿತ್ರ’ವಾಗಿ ಪರಿಗಣಿತವಾಗಿದ್ದು, ದೇವರ ಜೊತೆಗೆ ಅದಕ್ಕೂ ಪೂಜೆ ಸಲ್ಲಿಸಲಾಗುತ್ತಿದೆ.
ಈ ಘಟನೆ ನಗೀನಾ ಪ್ರದೇಶದ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ನಾಯಿ ದೇವಾಲಯಕ್ಕೆ ಪ್ರವೇಶಿಸಿ, ಆಂಜನೇಯನ ವಿಗ್ರಹದ ಸುತ್ತ 20ಕ್ಕೂ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಸ್ಥಳೀಯರ ಹೇಳಿಕೆಯಂತೆ, ಸೋಮವಾರ ಮುಂಜಾನೆ ದೇವಸ್ಥಾನಕ್ಕೆ ಬಂದ ನಾಯಿ ಗಂಟೆಗಳ ಕಾಲ ವಿಗ್ರಹದ ಸುತ್ತ ತಿರುಗುತ್ತಲೇ ಇತ್ತು. ನಂತರ ಅದು ಸಮೀಪದಲ್ಲಿದ್ದ ದುರ್ಗಾದೇವಿಯ ವಿಗ್ರಹದ ಬಳಿ ಹೋಗಿ ಅಲ್ಲಿ ಸಹ ಅದೇ ರೀತಿ ಪ್ರದಕ್ಷಿಣೆ ಹಾಕಿತು. ಈ ವಿಚಿತ್ರ ವರ್ತನೆ ಕಂಡ ಗ್ರಾಮಸ್ಥರು ಕಳವಳಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಸೂಚನೆ ಮೇರೆಗೆ ಪಶುವೈದ್ಯಕೀಯ ತಂಡವು ನಾಯಿಯನ್ನು ಪರಿಶೀಲಿಸಿದ್ದು, ಯಾವುದೇ ಗಾಯ ಅಥವಾ ಆರೋಗ್ಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಘಟನೆ ಬಳಿಕ ಗ್ರಾಮದಲ್ಲಿ ಭಕ್ತಿಭಾವ ಹೆಚ್ಚಾಗಿದ್ದು, ಹನುಮಾನ್ ದೇವರ ಜೊತೆಗೆ ನಾಯಿಗೂ ಪೂಜೆ ಸಲ್ಲಿಸುವುದು ಆರಂಭವಾಗಿದೆ.
ವೈರಲ್ ಆದ ವಿಡಿಯೋ ದಲ್ಲಿ ಒಬ್ಬ ಪುರೋಹಿತ ಪ್ರಾಣಿಯ ಪಕ್ಕದಲ್ಲಿ ಕುಳಿತಿದ್ದು, ದೇವಸ್ಥಾನಕ್ಕೆ ಬಂದ ಭಕ್ತರು ಅದರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಬಹುದು. ಜೊತೆಗೆ ದೇವಾಲಯದ ಆವರಣದೊಳಗೆ ನಾಯಿಗೆ ಹಾಸಿಗೆಯನ್ನು ಸಹ ಹಾಕಲಾಗಿದೆ.


