ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ, ಅಸ್ಸಾಂನಲ್ಲಿ ನಡೆದ ಈ ಘಟನೆ ಎಲ್ಲರ ಮನ ಮುಟ್ಟಿದೆ. ಯುಕೆಜಿ ಓದುತ್ತಿರುವ ಮಗನ ಮಾರ್ಕ್ಸ್‌ಕಾರ್ಡ್ ಪಡೆಯಲು ಶಾಲೆಗೆ ತೆರಳಿದ್ದ ತಂದೆಯೊಬ್ಬರು ಅಚಾನಕ್ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ದೀಪಂಕರ್ ಬೋರ್ಡೊಲೊಯ್ (35) ಎಂದು ಗುರುತಿಸಲಾಗಿದೆ.
ಜೋರ್ಹತ್‌ನ ಸ್ಯಾಮ್‌ಫೋರ್ಡ್ ಶಾಲೆಗೆ ದೀಪಂಕರ್ ತಮ್ಮ ಮಗನ ಫಲಿತಾಂಶ ಬಂದಿದ್ದು, ಮಾರ್ಕ್ಸ್ ಕಾರ್ಡ್ ಪಡೆಯಲು ಹೋಗಿದ್ದರು. ಕೆಲಸಕ್ಕೆ ಒಂದು ದಿನ ರಜೆ ಪಡೆದು ಶಾಲೆಗೆ ಬಂದಿದ್ದ ಅವರು, ಮಾರ್ಕ್ಸ್‌ಕಾರ್ಡ್ ಕೈಯಲ್ಲಿ ಹಿಡಿದು ಶಾಲಾ ಆವರಣದಿಂದ ಹೊರಬರುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಕ್ಷಣವೇ ಶಾಲೆಯ ಸಿಬ್ಬಂದಿ ಹಾಗೂ ಅಲ್ಲಿದ್ದ ಪೋಷಕರು ದೀಪಂಕರ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ದೀಪಂಕರ್ ಬೋರ್ಡೊಲೊಯ್ ಅಸ್ಸಾಂ ಸರ್ಕಾರದ ಟಿಯೋಕ್ ವಿಭಾಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ವಯಸ್ಸಿನಲ್ಲೇ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.


