ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಗರಗಳು ಆಹಾರದ ವಿಚಾರದಲ್ಲಿ ಸದಾ ವಿಭಿನ್ನ ಗುರುತನ್ನು ಹೊಂದಿವೆ. ಉತ್ತರದಿಂದ ದಕ್ಷಿಣದವರೆಗೆ ತುತ್ತು ತುತ್ತಿಗೂ ತನ್ನದೇ ಸ್ವಾದ, ತನ್ನದೇ ಪರಂಪರೆ ಇದೆ. ಇಂತಹ ಸಮಯದಲ್ಲಿ ಭಾರತವನ್ನು ಸುತ್ತಿ ವಿವಿಧ ರಾಜ್ಯಗಳ ಬೀದಿ ಆಹಾರವನ್ನು ಸವಿದ ವಿದೇಶಿ ಪ್ರವಾಸಿಗನೊಬ್ಬ, “ಭಾರತದ ಅತ್ಯುತ್ತಮ ಆಹಾರ ನಗರ”ವನ್ನು ಆಯ್ಕೆ ಮಾಡಿದ್ದಾರೆ. ಆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ನಗರ ಎಂದರೆ ನಮ್ಮದೇ ಬೆಂಗಳೂರು.
ಸ್ಕಾಟ್ಲೆಂಡ್‌ನ ಪ್ರವಾಸಿಗ ಹಗ್ ಅಬ್ರಾಡ್ (Hugh Abroad) ಎನ್ನುವ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಭಾರತ ಪ್ರವಾಸದ ವೇಳೆ ಅವರು ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿ ಸೇರಿ ಪ್ರಮುಖ ಏಳು ನಗರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಆಹಾರವನ್ನು ಸವಿದಿದ್ದರು. ನಂತರ ಪಾಕಿಸ್ತಾನ್ ಪ್ರವಾಸವೂ ನಡೆಸಿದ್ದರು.
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ ಹಗ್ ಅಬ್ರಾಡ್, ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, “ಭಾರತದ ಅತ್ಯುತ್ತಮ ಫುಡ್ ಸಿಟಿ ಬೆಂಗಳೂರು” ಎಂದು ಘೋಷಿಸಿದರು. ಇದಕ್ಕೆ ಕಾರಣವಾಗಿ ಅವರು ಬೆಂಗಳೂರಿನ ಬೆಳಗಿನ ಉಪಾಹಾರ ಸಂಸ್ಕೃತಿಯನ್ನು ಬಣ್ಣಿಸಿದರು. ಇಡ್ಲಿ-ಸಾಂಬಾರ್, ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. “ದೋಸೆಗಳು ಕ್ರಿಸ್ಪಿಯಾಗಿ ಇದ್ದು, ಇಡ್ಲಿಗಳು ಬಾಯಲ್ಲಿ ಇಟ್ಟರೆ ಕರಗುತ್ತವೆ. ಈ ಅನುಭವವೇ ಬೆಂಗಳೂರನ್ನು ನನ್ನ ದೃಷ್ಟಿಯಲ್ಲಿ ಭಾರತದ ಅತ್ಯುತ್ತಮ ಆಹಾರ ನಗರವನ್ನಾಗಿಸಿದೆ” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ ಜಿಲೇಬಿಯನ್ನೂ ಅವರು ಹೊಗಳಿದ್ದರು. ಆದರೂ ಒಟ್ಟಾರೆ ಆಹಾರದ ಅನುಭವದಲ್ಲಿ ಬೆಂಗಳೂರು ಅವರ ಹೃದಯ ಗೆದ್ದ ನಗರವಾಗಿ ಹೊರಹೊಮ್ಮಿದೆ.

