ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟು ಭೀಕರವಾಗಿದೆ ಎಂಬುದಕ್ಕೆ ಒಡಿಶಾದ ಜಾರ್ಸುಗುಡದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ 102 ಹೋಮ್ ಗಾರ್ಡ್ ಹುದ್ದೆಗಳಿಗಾಗಿ ಭಾನುವಾರ ನಡೆದ ಲಿಖಿತ ಪರೀಕ್ಷೆಯಲ್ಲಿ ಬರೋಬ್ಬರಿ 4,040 ಅಭ್ಯರ್ಥಿಗಳು ಪಾಲ್ಗೊಳ್ಳುವ ಮೂಲಕ ಉದ್ಯೋಗ ಮಾರುಕಟ್ಟೆಯ ಇಂದಿನ ಸಂಕಷ್ಟದ ಸ್ಥಿತಿಯನ್ನು ಪ್ರತಿಬಿಂಬಿಸಿದ್ದಾರೆ.
ವಿಶೇಷವೆಂದರೆ, ಈ ಹೋಮ್ ಗಾರ್ಡ್ ಹುದ್ದೆಗೆ ನಿಗದಿಪಡಿಸಲಾಗಿದ್ದ ಕನಿಷ್ಠ ಶೈಕ್ಷಣಿಕ ಅರ್ಹತೆ ಕೇವಲ 5ನೇ ತರಗತಿ. ಆದರೆ, ಕೆಲಸದ ಅನಿವಾರ್ಯತೆಯಿಂದಾಗಿ ಸ್ನಾತಕೋತ್ತರ ಪದವೀಧರರು ಹಾಗೂ ತಾಂತ್ರಿಕ ಶಿಕ್ಷಣ ಪಡೆದ ಯುವಕರು ಕೂಡ ಸಾಲಿನಲ್ಲಿ ನಿಂತಿದ್ದರು. ಪ್ರತಿಯೊಂದು ಹುದ್ದೆಗೂ ಸರಾಸರಿ 40 ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ.
ಇದೇ ರೀತಿಯ ಪರಿಸ್ಥಿತಿ ಇತ್ತೀಚೆಗೆ ಸಂಬಲ್ಪುರದಲ್ಲೂ ಕಂಡುಬಂದಿತ್ತು. ಅಲ್ಲಿ 187 ಹುದ್ದೆಗಳಿಗಾಗಿ ಬರೋಬ್ಬರಿ 8,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದು ಕೇವಲ ಒಂದು ಜಿಲ್ಲೆಯ ಕಥೆಯಲ್ಲ, ಇಂದಿನ ಯುವಜನತೆ ಎದುರಿಸುತ್ತಿರುವ ಉದ್ಯೋಗ ಬಿಕ್ಕಟ್ಟಿನ ಕನ್ನಡಿಯಾಗಿದೆ.

