April 10, 2026
Friday, April 10, 2026
spot_img

Viral | ಹೃದಯವಂತ ಕಣ್ರೀ…ನಮ್ಮ ಸಂಜು: ಅಭಿಮಾನಿಗೆ ಕೊಟ್ಟ ಗಿಫ್ಟ್ ನೋಡಿ ನೆಟ್ಟಿಗರಂತೂ ಫಿದಾ ಆಗೋದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈದಾನದಲ್ಲಿ ರನ್‌ಗಳ ಕೊರತೆಯಿಂದ ಟೀಕೆ ಎದುರಿಸುತ್ತಿದ್ದರೂ, ಮೈದಾನದ ಹೊರಗೆ ತಮ್ಮ ಸರಳತೆ ಮತ್ತು ದೊಡ್ಡ ಮನಸ್ಸಿನಿಂದ ಸಂಜು ಸ್ಯಾಮ್ಸನ್ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ 2026ರಲ್ಲಿ ಆಡುತ್ತಿರುವ ಸಂಜು, ಕೇರಳದಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯ ಮೂಲಕ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

ಕೋಝಿಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮುಂಡೂರು–ತೂತಾ ರಸ್ತೆಯ ಪುಂಚಪ್ಪಾಡಂ ಬಳಿ ಅವರು ತಮ್ಮ ಕಾರನ್ನು ಕ್ಷಣಕಾಲ ನಿಲ್ಲಿಸಿದ್ದರು. ಇದೇ ವೇಳೆ ಕ್ರಿಕೆಟ್ ಆಡಲು ತೆರಳುತ್ತಿದ್ದ ಶಬರೀಶ್ ಮತ್ತು ಅವರ ಸ್ನೇಹಿತರು ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ಗುರುತಿಸಿ ಮಾತುಕತೆಗೆ ಮುಂದಾದರು. ಸಂಜು ಆತ್ಮೀಯವಾಗಿ ಮಾತನಾಡಿ ಸೆಲ್ಫಿಗೆ ಒಪ್ಪಿಕೊಂಡರು. ಆ ವೇಳೆ ಅಭಿಮಾನಿಯ ಮೊಬೈಲ್‌ ಫೋನ್‌ನ ಡಿಸ್‌ಪ್ಲೇ ಸಂಪೂರ್ಣ ಒಡೆದಿರುವುದು ಅವರ ಗಮನಕ್ಕೆ ಬಂದಿದೆ.

ಅಭಿಮಾನಿಯ ಪರಿಸ್ಥಿತಿ ಕಂಡು ಮರುಗಿದ ಸಂಜು, ತಮ್ಮ ಕಾರಿನಲ್ಲಿದ್ದ ಹೊಸ ಸ್ಮಾರ್ಟ್‌ಫೋನ್‌ನ್ನು ತಕ್ಷಣವೇ ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು ₹40 ಸಾವಿರ ಮೌಲ್ಯದ ಈ ಫೋನ್‌ ನೀಡಿದ ಅವರ ಉದಾರ ಮನಸ್ಸು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು “ಮೈದಾನದಲ್ಲಿ ರನ್ ಕಡಿಮೆ ಇದ್ದರೂ, ಹೃದಯದಲ್ಲಿ ಅವರು ಸದಾ ಚಾಂಪಿಯನ್” ಎಂದು ಕೊಂಡಾಡುತ್ತಿದ್ದಾರೆ.

ಇದೀಗ ಸಿಎಸ್‌ಕೆ ಸತತ ಸೋಲುಗಳಿಂದ ಒತ್ತಡದಲ್ಲಿದ್ದು, ಸಂಜು ಮೊದಲ ಮೂರು ಪಂದ್ಯಗಳಲ್ಲಿ 6, 7 ಮತ್ತು 9 ರನ್‌ಗಳಿಗೆ ಸೀಮಿತರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ದೊಡ್ಡ ಇನ್ನಿಂಗ್ಸ್ ಮೂಲಕ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !