ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 15ನೇ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾದುದು ಮತ್ತೊಂದು ಹೈ ಡ್ರಾಮಾ ಪಂದ್ಯಕ್ಕೆ. ಗೆಲುವಿನ ನಿರೀಕ್ಷೆಯಲ್ಲಿ ತವರಿನಲ್ಲಿ ಕಣಕ್ಕಿಳಿದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ ಎಸೆತದವರೆಗೂ ಹೋರಾಡಿ 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಅಜಿಂಕ್ಯ ರಹಾನೆ ಚುರುಕಿನ 41 ರನ್ ಗಳಿಸಿದರೆ, ಅಂಕುಶ್ ರಘುವಂಶಿ 45 ರನ್‌ಗಳ ಕೊಡುಗೆ ನೀಡಿದರು. ಅಂತಿಮ ಓವರ್‌ಗಳಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ರೋವ್ಮನ್ ಪೊವೆಲ್ ದಿಟ್ಟ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಇದನ್ನೂ ಓದಿ:
ಗುರಿ ಬೆನ್ನಟ್ಟಿದ ಲಕ್ನೋ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 16ನೇ ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ತಂಡವನ್ನು ಯುವ ಬ್ಯಾಟರ್ ಮುಕುಲ್ ಚೌಧರಿ ಮತ್ತು ಆಯುಷ್ ಬದೋನಿ ಅದ್ಭುತವಾಗಿ ಕಾಪಾಡಿದರು. ಮುಕುಲ್ ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿ ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿದರು. ಬದೋನಿಯ 54 ರನ್‌ಗಳ ಜೊತೆಯಾಟ ಲಕ್ನೋಗೆ ಬಲ ನೀಡಿತು.
ಈ ಸೋಲಿನೊಂದಿಗೆ ಕೆಕೆಆರ್‌ಗೆ ಲೀಗ್‌ನಲ್ಲಿ ಸತತ ನಾಲ್ಕನೇ ಹಿನ್ನಡೆ ಎದುರಾಗಿದ್ದು, ತಂಡದ ಪ್ಲೇಆಫ್ ಕನಸಿಗೆ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಂತಾಗಿದೆ. ಇನ್ನೊಂದೆಡೆ ಲಕ್ನೋ ತಂಡ ಯುವ ಆಟಗಾರರ ಅದ್ಭುತ ಪ್ರದರ್ಶನದ ಮೂಲಕ ಆತ್ಮವಿಶ್ವಾಸದ ಜಯ ದಾಖಲಿಸಿದೆ.



