ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿ ಎಂಬ ಪದಕ್ಕೆ ಅರ್ಥ ನೀಡುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪ್ರವಾಹದ ನೀರಿನ ನಡುವೆ ಕೊಚ್ಚಿ ಹೋಗುತ್ತಿದ್ದ ಮರಿಯಾನೆಯನ್ನು ತಾಯಿ ಆನೆ ಸಾಹಸಮಯವಾಗಿ ರಕ್ಷಿಸಿದ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನೀರಿನ ಹರಿವು ಎಷ್ಟು ಪ್ರಬಲವಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಆನೆ ಮತ್ತು ಅದರ ಮರಿ ನದಿಯ ಉಕ್ಕುವ ನೀರಿನಲ್ಲಿ ಸಿಲುಕಿಕೊಂಡು ಕ್ಷಣಕಾಲ ಅಪಾಯಕ್ಕೆ ಒಳಗಾಗುತ್ತವೆ. ತಾಯಿ ಆನೆ ತನ್ನ ಶಕ್ತಿಯನ್ನು ಬಳಸಿ ನೀರಿನ ಒತ್ತಡವನ್ನು ಎದುರಿಸಿ ತಾನೇ ನಿಂತುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದರೆ ಮರಿ ಆನೆ ನೀರಿನ ಸೆಳೆತಕ್ಕೆ ಒಳಗಾಗಿ ತೇಲಲಾರಂಭಿಸುತ್ತದೆ.
ಈ ದೃಶ್ಯ ಕಂಡ ತಾಯಿ ಆನೆ ತಕ್ಷಣ ಪ್ರತಿಕ್ರಿಯಿಸಿ, ತನ್ನ ಸೊಂಡಿಲಿನಿಂದ ಮರಿಯನ್ನು ಹಿಡಿದುಕೊಂಡು ನೀರಿನಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತದೆ. ಪ್ರವಾಹದ ಮಧ್ಯೆ ನಡೆದ ಈ ದೃಶ್ಯ ನೆಟ್ಟಿಗರ ಕಣ್ಣಂಚು ಒದ್ದೆ ಮಾಡಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತಾಯಿಯ ಮಮತೆ ಪ್ರಾಣಿಗಳಲ್ಲಿಯೂ ಎಷ್ಟು ಆಳವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ, ತಾಯಿಯ ಪ್ರೀತಿ ಒಂದೇ ಎಂಬ ಮಾತು ಮತ್ತೆ ಸಾಬೀತಾಗಿದೆ.


