March 18, 2026
Wednesday, March 18, 2026
spot_img

Viral | ಎಷ್ಟೇ ಕಾದ್ರೂ ಆ್ಯಂಬುಲೆನ್ಸ್ ಬರಲೇ ಇಲ್ಲ! ರಸ್ತೆ ಬದಿಯಲ್ಲಿ ಟಾರ್ಚ್ ಬೆಳಕಿನಲ್ಲೇ ಹೆರಿಗೆ ಆಗೋಯ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗದ ಕಾರಣ ಗರ್ಭಿಣಿ ಮಹಿಳೆಯೊಬ್ಬರು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯದ ಕೊರತೆ ಹಾಗೂ ತುರ್ತು ಆರೋಗ್ಯ ಸೇವೆಗಳ ದೌರ್ಬಲ್ಯವನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ.

ಹಳ್ಳಿಯಲ್ಲಿ ವಾಸಿಸುತ್ತಿದ್ದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು 108 ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದರೂ, ರಸ್ತೆ ಸರಿಯಿಲ್ಲ ಎಂಬ ಕಾರಣ ನೀಡಿ ವಾಹನ ಬರಲು ವಿಳಂಬವಾಗುತ್ತಿದೆ ಎಂಬ ಮಾಹಿತಿ ಮಾತ್ರ ಲಭ್ಯವಾಯಿತು. ಗಂಟೆಗಟ್ಟಲೆ ಕಾಯುತ್ತಿದ್ದರೂ ಆ್ಯಂಬುಲೆನ್ಸ್ ಆಗಮಿಸದ ಹಿನ್ನೆಲೆಯಲ್ಲಿ, ಕುಟುಂಬವು ಮಹಿಳೆಯನ್ನು ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಯಿತು.

ಇದನ್ನೂ ಓದಿ:

ಆದರೆ ಮಧ್ಯದಲ್ಲೇ ನೋವು ಅತಿಯಾಗಿ ಹೆಚ್ಚಿದ ಕಾರಣ ರಸ್ತೆ ಬದಿಯಲ್ಲೇ ಹೆರಿಗೆ ಮಾಡಿಸುವ ಅನಿವಾರ್ಯತೆ ಎದುರಾಯಿತು. ಊರಿನ ಮಹಿಳೆಯರು ಟಾರ್ಪಲ್‌ನ್ನು ತಾತ್ಕಾಲಿಕ ಪರದೆಯಾಗಿ ಕಟ್ಟಿಕೊಂಡು, ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಹೆರಿಗೆ ಮಾಡಿಸಿದರು. ತೀವ್ರ ಚಳಿಯಿಂದ ತಾಯಿ ಮತ್ತು ನವಜಾತ ಶಿಶುವನ್ನು ರಕ್ಷಿಸಲು ಗ್ರಾಮಸ್ಥರು ಬಟ್ಟೆ ಹಾಗೂ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿದರು.

ಬೆಳಗಿನ ಜಾವ ಖಾಸಗಿ ವ್ಯಾನ್ ಒಂದರ ಮೂಲಕ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಇಲಾಖೆ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !