January19, 2026
Monday, January 19, 2026
spot_img

Viral | ಮೆಟ್ರೋದಲ್ಲಿ ಲೈಂಗಿಕ ಕಿರುಕುಳ! ‘ಇನ್ಯಾವತ್ತೂ ಇಲ್ಲಿ ಕಾಲಿಡಲ್ಲ’ ಎಂದ ಅಮೆರಿಕನ್ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ರೈಲಿನಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿತ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕ ಮೂಲದ ಮಹಿಳೆಯೊಬ್ಬರಿಗೆ ಮೆಟ್ರೋ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಷಯವನ್ನು ಅಮೆರಿಕದ ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭಾರತ ಮೂಲದ ಪ್ರಾಧ್ಯಾಪಕ ಗೌರವ್ ಸಬ್ನಿಸ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಭಾರತಕ್ಕೆ ಸ್ನೇಹಿತನ ಮದುವೆಗೆ ಬರಲು ಯೋಜಿಸಿದ್ದ ತಮ್ಮ ಮಾಜಿ ಅಮೆರಿಕನ್ ವಿದ್ಯಾರ್ಥಿನಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ.

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅಪ್ರಾಪ್ತನಾಗಿರುವ ಬಾಲಕನೊಬ್ಬ ಆಕೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಬಾಲಕ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ಇದ್ದನು ಎನ್ನಲಾಗಿದೆ. ಆರಂಭದಲ್ಲಿ ಭುಜದ ಮೇಲೆ ಕೈ ಇಟ್ಟ ಬಾಲಕ, ನಂತರ ಆಕೆಯ ದೇಹಕ್ಕೆ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಇದರಿಂದ ಕೋಪಗೊಂಡ ಆಕೆ ಆತನನ್ನು ತಳ್ಳಿದ್ದಾಳೆ. ಈ ಸಂದರ್ಭ ಬಾಲಕ ಕೆಳಗೆ ಬಿದ್ದಿದ್ದು, ಆತನ ತಾಯಿ ಜೋರಾಗಿ ಕೂಗಿಕೊಂಡು ಮಾತನಾಡಿದ್ದಾಳೆ ಎಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಆಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಭಾರತಕ್ಕೆ ಬರಲು ಇಚ್ಛೆ ಇಲ್ಲವೆಂದು ಹೇಳಿದ್ದಾಳೆ ಎಂದು ಸಬ್ನಿಸ್ ತಿಳಿಸಿದ್ದಾರೆ. ಈ ಪೋಸ್ಟ್‌ಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಪೊಲೀಸ್ ದೂರು ನೀಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಘಟನೆ ಸಂಬಂಧವಾಗಿ ಪೊಲೀಸರು ಅಥವಾ ಮೆಟ್ರೋ ಆಡಳಿತದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Must Read