ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಮಹಿಳೆಯೊಬ್ಬರು ದೆಹಲಿ ಮೆಟ್ರೋದಲ್ಲಿನ ಮಹಿಳಾ ಕೋಚ್‌ನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ವಿಡಿಯೋ ವೈರಲ್ ಆಗಿದೆ. ಅವರು ಮೆಟ್ರೋದಲ್ಲಿ ಪ್ರಯಾಣಿಸಿ, ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಆ ವಿಡಿಯೋ ಈಗ ಬಹಳಷ್ಟು ಜನರ ಗಮನ ಸೆಳೆಯುತ್ತಿದೆ.
ಈ ವಿಡಿಯೋವನ್ನು @an.leman ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಲಾಗಿದೆ. ವಿಡಿಯೋದಲ್ಲಿ ಆಕೆ ಮಹಿಳಾ ಕೋಚ್‌ನ ಮುಂಭಾಗದಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವೇಳೆ ತನ್ನ ಅನುಭವವನ್ನು ಹಂಚಿಕೊಂಡು, “ಇಂದು ಮಹಿಳೆಯರ ಕೋಚ್ ಅನ್ನು ಪರೀಕ್ಷಿಸುತ್ತಿದ್ದೇನೆ. ಹೇಗೆ ಗೊತ್ತಿಲ್ಲ, ಆದರೆ ಭಾರತದಲ್ಲಿ ಮೆಟ್ರೋ ಚಾಲಕರಿಲ್ಲದೆ ಓಡುತ್ತಿರುವಂತೆ ಕಾಣುತ್ತದೆ” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
ಇದನ್ನೂ ಓದಿ:
“ನ್ಯೂ ಡೆಲ್ಲಿ ಮೆಟ್ರೋ ಮಾಸ್ಕೋ ಮೆಟ್ರೋಗಿಂತ ಕಡಿಮೆ ಇಲ್ಲ, ಬಹುಶಃ ಇನ್ನೂ ಉತ್ತಮ ಇರಬಹುದು” ಎಂಬ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ವೈರಲ್ ಆದ ನಂತರ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೆಲವರು ದೆಹಲಿ ಮೆಟ್ರೋ ಸ್ವಚ್ಛತೆ ಮತ್ತು ವ್ಯವಸ್ಥೆಯನ್ನು ಮೆಚ್ಚಿಕೊಂಡಿದ್ದಾರೆ. “ನಾವು ಪುರುಷರು ಈ ರೀತಿಯ ಮುಂಭಾಗದ ದೃಶ್ಯವನ್ನು ನೋಡಲು ಸಾಧ್ಯವಿಲ್ಲ, ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ತಮಾಷೆಯಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು “ಅನೇಕ ವಿದೇಶಿಗಳು ದೆಹಲಿ ಮೆಟ್ರೋ ನ್ಯೂಯಾರ್ಕ್, ಲಂಡನ್ ಮತ್ತು ಟೊರೊಂಟೊ ಮೆಟ್ರೋಗಿಂತ ಉತ್ತಮ ಎಂದು ಹೇಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಆದರೆ, ಕೆಲವರು ಆಕೆಗೆ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.



