ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳ ಬೆಸ್ಟ್ ಫ್ರೆಂಡ್ ಎಂದೇ ಖ್ಯಾತಿ ಪಡೆದಿರುವ, ಮತ್ತು ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರ ವರ್ತನೆಯಿಂದ ಗಮನ ಸೆಳೆಯುವ ಒರಿ ಅಲಿಯಾಸ್ ಓರ್ಹಾನ್ ಅವತ್ರಮಣಿ ಅವರು ಇದೀಗ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ₹252 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ ಸೆಲ್ ಅಧಿಕಾರಿಗಳು ಓರಿ ಅವರನ್ನು ವಿಚಾರಣೆಗಾಗಿ ಕರೆಸಿದ್ದಾರೆ.
ಈ ಹಿಂದೆ ಎಎನ್‌ಸಿ ಅಧಿಕಾರಿಗಳಿಂದ ನೋಟಿಸ್ ಪಡೆದಿದ್ದ ಓರಿ, ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಆದರೆ, ಇಂದು ಅವರು ಖುದ್ದಾಗಿ ಎಎನ್‌ಸಿ ಕಚೇರಿಗೆ ಬಂದು ವಿಚಾರಣೆ ಎದುರಿಸಿದ್ದಾರೆ.
ಓರಿ ಕಚೇರಿಗೆ ಆಗಮಿಸಿದಾಗ ಅಲ್ಲಿದ್ದ ದೃಶ್ಯವು ಅವರ ಅತಿಯಾದ ಜನಪ್ರಿಯತೆಗೆ ಸಾಕ್ಷಿಯಂತಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು, ಫೋಟೋಗ್ರಾಫರ್‌ಗಳು ಮತ್ತು ಪಾಪರಾಜಿಗಳು ಅವರನ್ನು ಮುತ್ತಿಕೊಂಡರು. ಸೆಲೆಬ್ರಿಟಿ ಸ್ಟಾರ್‌ಗಳ ಪಾರ್ಟಿಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಓರಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಓರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಅವರ ವರ್ತನೆ ವಿಭಿನ್ನವಾಗಿರುವ ಕಾರಣ ಜನರು ಕುತೂಹಲದಿಂದ ಅವರನ್ನು ಹಿಂಬಾಲಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 20 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಓರಿ, ಮುಖ್ಯವಾಗಿ ಸ್ಟಾರ್ ಕಿಡ್‌ಗಳು ಮತ್ತು ಯುವ ಸೆಲೆಬ್ರಿಟಿಗಳಾದ ಅನನ್ಯಾ ಪಾಂಡೆ, ಖುಷಿ ಕಪೂರ್, ಸುಹಾನಾ ಖಾನ್ ಅವರೊಂದಿಗೆ ಆಪ್ತರಾಗಿದ್ದಾರೆ. ದೀಪಿಕಾ ಪಡುಕೋಣೆ, ಬೋನಿ ಕಪೂರ್, ಊರ್ವಶಿ ರೌಟೇಲಾ ಅವರಂತಹ ಪ್ರಮುಖರೊಂದಿಗೆ ಇರುವ ಫೋಟೋಗಳನ್ನು ಸಹ ಅವರು ಆಗಾಗ ಹಂಚಿಕೊಳ್ಳುತ್ತಾರೆ.
ಇದೇ ಡ್ರಗ್ಸ್ ಪ್ರಕರಣದ ಸಂಬಂಧ ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕೂಡ ಈ ಹಿಂದೆ ವಿಚಾರಣೆ ಎದುರಿಸಿದ್ದರು. ಈಗ ಓರಿ ವಿಚಾರಣೆ ಎದುರಿಸಿರುವುದು ಬಾಲಿವುಡ್ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.

