ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಟೋಲ್ ಪ್ಲಾಜಾದಲ್ಲಿ ನಡೆದ ಭೀಕರ ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅಪಘಾತದ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ.
ಫಾಸ್ಟ್‌ಟ್ಯಾಗ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಎರಡು ಕಾರುಗಳು ಟೋಲ್ ಬೂತ್ ಬಳಿ ನಿಂತಿದ್ದವು. ಟೋಲ್ ಸಿಬ್ಬಂದಿ ಟ್ಯಾಗ್ ಸ್ಕ್ಯಾನ್ ಮಾಡುವ ವೇಳೆ ಹಿಂದಿನಿಂದ ಅತೀವೇಗದಲ್ಲಿ ಬಂದ ಟ್ರಕ್ ಯಾವುದೇ ಎಚ್ಚರಿಕೆ ಇಲ್ಲದೆ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದು ಟೋಲ್ ಸಿಬ್ಬಂದಿ ಸಮೇತ ಕಾರ್ ಮುಂದೆ ಹೋಗಿದೆ. ಕ್ಷಣಾರ್ಧದಲ್ಲೇ ಪರಿಸ್ಥಿತಿ ಅಸ್ತವ್ಯಸ್ತವಾಗಿದ್ದು, ಟೋಲ್ ಸಿಬ್ಬಂದಿ ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತದ ಭೀಕರ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ನೋಡಿದವರಲ್ಲಿ ಆತಂಕ ಮೂಡಿಸಿದೆ. ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರಕ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಶಂಕಿಸಿದ್ದಾರೆ.


