ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ಸಿರಿ-ಸೊಬಗಿನ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ, ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಕ್ಷಣಗಣನೆ ಆರಂಭವಾಗಿದೆ.
ಈ ಬಾರಿಯ ವಿರಾಸತ್‌ನ ವಿಶೇಷ ರಥಾರತಿ. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಬಲದಿಂದ ಎಡಕ್ಕೆ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಇರಲಿದ್ದಾರೆ. ರಥದ ಜೊತೆ ಮೈಸೂರು, ಪಂಡರಾಪುರ ಹಾಗೂ ಹರೇಕೃಷ್ಣ ಪಂಥದ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಎಡದಿಂದ ಬಲಕ್ಕೆ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.