ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯವರ ಪ್ರಾಬಲ್ಯ ಮುಂದುವರಿದಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಇದೀಗ ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 120 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಸಹಿತ ಅಸಾಧಾರಣ 135 ರನ್‌ಗಳ ಕೊಡುಗೆ ನೀಡಿದರು. ಈ ಭರ್ಜರಿ ಶತಕದೊಂದಿಗೆ, ಅವರು ಕೇವಲ ಒಂದೇ ಸ್ವರೂಪದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈವರೆಗೆ ಈ ಶ್ರೇಷ್ಠ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 51 ಶತಕಗಳನ್ನು ಸಿಡಿಸಿ ಈ ಮೈಲಿಗಲ್ಲನ್ನು ಸಾಧಿಸಿದ್ದರು.
ಆದರೆ, ಸೌತ್ ಆಫ್ರಿಕಾ ವಿರುದ್ಧದ ಈ ಸೆಂಚುರಿಯ ಮೂಲಕ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ಶತಕಗಳ ಸಂಖ್ಯೆಯನ್ನು 52ಕ್ಕೆ ಏರಿಸಿದ್ದು, ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯನ್ನು ಮುರಿದು, ನೂತನ ‘ಸೆಂಚುರಿ ಕಿಂಗ್’ ಆಗಿ ಹೊರಹೊಮ್ಮಿದ್ದಾರೆ.
ವಿಶೇಷವೆಂದರೆ, ರಾಂಚಿಯಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಈ 52ನೇ ಏಕದಿನ ಶತಕವು, ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೂಡಿಬಂದ 7000ನೇ ಶತಕವಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಈ ಮಹತ್ವದ 7000ನೇ ಸೆಂಚುರಿಯನ್ನು ಬಾರಿಸಿದ ಕೀರ್ತಿ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಈ ಅಪೂರ್ವ ಸಾಧನೆಯು ಅವರ ಶತಕವನ್ನು ಮತ್ತಷ್ಟು ವಿಶೇಷಗೊಳಿಸಿದೆ.

