ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನ್ ಸ್ಟುಡಿಯೋದಲ್ಲಿರುವ ಜಾಗ ನಮ್ಮೆಲ್ಲರಿಗೂ ಪುಣ್ಯಭೂಮಿ. ಅಪ್ಪಾಜಿಯ ಹುಟ್ಟುಹಬ್ಬ ಮತ್ತು ಪುಣ್ಯತಿಥಿಗಳನ್ನು ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಲ್ಲಿಗೆ ಬಂದು ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಾರೆ. ಅಭಿಮಾನಿಗಳು ಬರಲು ಅವಕಾಶ ನೀಡುವಂತೆ ಬಾಲಣ್ಣ ಅವರಿಗೆ ನಾನು ಅನೇಕ ಬಾರಿ ವಿನಂತಿಸಿದ್ದೆ. ಆದರೆ, ನಮ್ಮ ಹೋರಾಟದ ಫಲ ಕೈಗೂಡಲಿಲ್ಲ. ನಮ್ಮ ಹೋರಾಟ ನಮಗೆ ತಲುಪಿಯೂ ಇಲ್ಲ. ನಮ್ಮನ್ನ ವಿಲನ್ ಮಾಡಿ ಅವರು ಹಿರೋ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜಟ್ಕರ್ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ತೆರವು ಕುರಿತು ಮಾತನಾಡಿದ ಅವರು, ಸ್ಮಾರಕ ತೆರವು ಮಾಡುವ ವಿಷಯ ನಮಗೂ ತಿಳಿದಿರಲಿಲ್ಲ . ನಾನು ಎರಡು ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆ ಚರ್ಚೆ ಮಾಡಿದ್ದೇನೆ. ಅಪ್ಪಾಜಿಯ ಅಭಿಮಾನಿಗಳ ವಿರುದ್ಧ ನಾನು ಯಾವತ್ತೂ ನಿಲ್ಲಲಿಲ್ಲ. ಆದರೆ, ವಿಚಾರವೇ ತಿಳಿಯದೆ ನಮ್ಮ ವಿರುದ್ಧ ಮಾತನಾಡುವವರನ್ನು ನಾವು ವಿರೋಧಿಸುತ್ತೇವೆ. ಅಭಿಮಾನಿಗಳು ಸ್ವತಃ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ವಿಷ್ಣುವರ್ಧನ್ ಕುಟುಂಬವನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಸ್ಮಾರಕ ತೆರವು ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ನಿಮಗೆ ಸಾಹಸ ಸಿಂಹ ವಿಷ್ಣುವರ್ಧನ್ ಅಂತ ನಿಮಗೆ ಎಷ್ಟು ಪ್ರೀತಿ ಇದೆಯೋ. ಅದೇ ತರ ನಮಗೆ ಅಪ್ಪ ಅನ್ನೋ ಪ್ರೀತಿ ಇದೆ. ನಮ್ಮನ್ನು ಕುಟುಂಬದ ಶತ್ರು ಎಂದು ತಪ್ಪಾಗಿ ಭಾವಿಸಬೇಡಿ. ನಮ್ಮ ಜೊತೆ ಸೇರಿಕೊಳ್ಳಿ. ನಮ್ಮ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದನ್ನು ಅರಿತುಕೊಳ್ಳಿ. ನಮ್ಮ ಮನೆ ಬಾಗಿಲು ಯಾವಾಗಲೂ ತೆರೆದಿದೆ. ಬಂದು ನೇರವಾಗಿ ಕೇಳಿದರೆ ಎಲ್ಲ ವಿವರಗಳನ್ನು ಹೇಳುತ್ತೇನೆ ಎಂದು ಹೇಳಿದರು.
2018 ರಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಹೇಳಿದರೂ ಕಾರ್ಯಗತವಾಗಲಿಲ್ಲ. 2023 ರಲ್ಲಿ ಪೂಜೆ ಮಾಡಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಯಿತು. ಆದರೆ, 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಮಾರಕವನ್ನು ಧ್ವಂಸ ಮಾಡಿರುವುದು ಸರಿಯಲ್ಲ. ನಾನು ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಕೇಳಿದ್ದೇನೆ. ಕರ್ನಾಟಕದ ಸಾಧಕರನ್ನು ಗುರುತಿಸಲು ಒಬ್ಬ ನಟನಾಗಿ ಮನವಿ ಮಾಡಿದ್ದೇನೆ ಎಂದು ಅನಿರುದ್ಧ ಹೇಳಿದರು.
ಭಾರತಿ ಅಮ್ಮನವರು ಈ ವಿಚಾರವಾಗಿ ತುಂಬಾ ನೊಂದುಕೊಂಡ್ರು. ಮೈಸೂರಲ್ಲಿ ಅದ್ಭುತವಾದ ಸ್ಮಾರಕ ಆಗಿದೆ. 5 ಎಕರೆ ಜಾಗದಲ್ಲಿ ಸ್ಮಾರಕ ಇದೆ. ಯಾವ ಸಿನಿಮಾ ಸ್ಟಾರ್ ಗಳಿಗೂ ಅಂತಹ ಸ್ಮಾರಕ ಮಾಡಿಲ್ಲ ಅನಿಸುತ್ತೆ. ಇದ್ರ ಜೊತೆಗೆ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಬೇಕು ಅಂದುಕೊಂಡಿದ್ದೇವೆ. ಸಾಹಸಸಿಂಹ ವಿಷ್ಣುವರ್ಧನ್ ಹೆಸರಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಲು ಮುಂದಾಗಿದ್ದೇವೆ. ಇದು ಆದ್ರೆ ಸೂಕ್ತ ರೀತಿಯ ಗೌರವ ಸೂಚಿಸುವ ರೀತಿ ಆಗುತ್ತೆ ಎಂದಿದ್ದಾರೆ.