ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿ ಮಹಾನಗರ ಪಾಲಿಕೆಯ ಬಜೆಟ್ ಅಧಿವೇಶನದಲ್ಲಿ ನಿನ್ನೆ ಒಂದು ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ನಗರದ ಟೌನ್ ಹಾಲ್‌ನಲ್ಲಿರುವ ಪಾಲಿಕೆ ಕಟ್ಟಡದಲ್ಲಿ ನಿಗದಿಯಾಗಿದ್ದ ಬಜೆಟ್ ಮಂಡನೆಗೂ ಮುನ್ನ, ಇತ್ತೀಚೆಗೆ ಹತ್ಯೆಗೀಡಾದ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಸಂತಾಪ ಸೂಚಿಸಲಾಯಿತು.
ಬಜೆಟ್ ಮಂಡನೆಯ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ವಾರ್ಡ್ ನಂಬರ್ 24ರ ಸದಸ್ಯೆ ಸಯೀದಾ ನೂರ್ ಫಾತೀಮಾ ಜೈದಿ ಅವರು ಇರಾನ್ ನಾಯಕನ ನಿಧನದ ಕುರಿತು ಶೋಕ ವ್ಯಕ್ತಪಡಿಸುವ ನಿರ್ಣಯವನ್ನು ಮಂಡಿಸಿದರು. ಸಯೀದಾ ಅವರು ಮಂಡಿಸಿದ ಈ ನಿರ್ಣಯಕ್ಕೆ ಸದನದಲ್ಲಿದ್ದ ಮೇಯರ್, ಪಾಲಿಕೆ ಆಯುಕ್ತರು ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್‌ನ ಎಲ್ಲಾ ಸದಸ್ಯರು ಒಮ್ಮತದಿಂದ ಬೆಂಬಲ ಸೂಚಿಸಿದರು.
ಅಂತಾರಾಷ್ಟ್ರೀಯ ಮಟ್ಟದ ನಾಯಕನ ಹತ್ಯೆಗೆ ಕಲಬುರಗಿ ಮಹಾನಗರ ಪಾಲಿಕೆಯ ಅಂಗಳದಲ್ಲಿ ಸಂತಾಪ ಸೂಚಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶೋಕ ನಿರ್ಣಯದ ನಂತರ ಪಾಲಿಕೆಯ ಬಜೆಟ್ ಮಂಡನೆ ಪ್ರಕ್ರಿಯೆ ಮುಂದುವರಿಯಿತು.



