ಹೊಸದಿಗಂತ ಡಿಜಿಟಲ್ ಡೆಸ್ಕ್ :
ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Karnataka Maharshi Valmiki Scheduled Tribe Development Corporation Ltd) ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ವಾಲ್ಮೀಕಿ ನಿಗಮ ಅಕ್ರಮದ (Valmiki Corporation Scam) ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಕೂಡ ನನ್ನ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ರಾಜೀನಾಮೆ ನೀಡುವುದು ನನ್ನ ಸ್ವ ನಿರ್ಧಾರವಾಗಿದೆ. ರಾಜೀನಾಮೆ ನೀಡಲು ಯಾರೂ ಒತ್ತಡ ಹಾಕಿಲ್ಲ. ಆತ್ಮ ಸಾಕ್ಷಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ. ಇದಕ್ಕಾಗಿ ಸಿಎಂ ಬಳಿ ಸಮಯ ಕೇಳಿದ್ದೇನೆ. ಈ ಬಗ್ಗೆ ನಾನು ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ನಿರ್ದೋಷಿ. ಪ್ರಕರಣದಲ್ಲಿ ತನಿಖೆ ನಡೆದು ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ಗುರುವಾರ ಬೆಳಗ್ಗೆ ಮನವಿ ಪತ್ರಸಲ್ಲಿಸಿದ್ದರು. ನಂತರ ಸಚಿವ ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ.