ಹೊಸದಿಗಂತ ವರದಿ ವಿಜಯಪುರ:
ಯಾವ ವ್ಯಕ್ತಿ ಹೆಚ್ಚು ಕೆಲಸ ಮಾಡುತ್ತಾನೆ ಜೊತೆಗೆ ಜನರ ಸಂಪರ್ಕದಲ್ಲಿರುತ್ತಾನೆ ಹಾಗೂ ಜನರಿಗೆ ಸ್ಪಂದಿಸುವಂತಹ ವ್ಯಕ್ತಿಗೆ ಮತ ಹಾಕಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾಗಿ ಆಯ್ಕೆಯಾಗಿ ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬಾರದು. ಒಳ್ಳೆಯ ವ್ಯಕ್ತಿಗೆ ಜೊತೆಗೆ ನಾಡಿನ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಮತ ಹಾಕಬೇಕು ಎಂದರು.
ಮತದಾರರನ್ನು ಸೆಳೆಯಲು ವಿವಿಧ ಕಾಣಿಕೆ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಣಿಕೆ ವಿಚಾರದಲ್ಲಿ ಜನರು ಕೆಟ್ಟಾಗಲೇ ರಾಜಕಾರಣಿಗಳು ಕೆಟ್ಟಿದ್ದಾರೆ. ರಾಜಕಾರಣಿಗಳು ನೀಡುವ ಕಾಣಿಕೆಯ ಮೇಲೆ ಜನರು ಜೀವನ ಮಾಡುತ್ತಾರಾ ? ಎಂದರು.
ನಾವೇನು ಶಂಖ ಹೊಡೆದರು ಬದಲಾವಣೆ ಆಗಲ್ಲ. ಮತದಾರರು ಮನಸ್ಸು ಮಾಡಿದರೆ ಶೇ. 30 ರಿಂದ 40 ಪ್ರಮಾಣದಲ್ಲಿ ಬದಲಾವಣೆ ಆಗಬಹುದು ಎಂದು ತಿಳಿಸಿದರು.
ಹೀಗಾಗಿ ಗಿಫ್ಟ್ ಹಂಚಿಕೆ ಘಟನೆಗಳು ಆಗಬಾರದು. ಹಣ ಹಾಗೂ ಇತರೆ ಕಾಣಿಕೆ ನೀಡಿ ಆಯ್ಕೆಯಾದವ ಏನು ಆಗುತ್ತಾನೆ ? ಹಣಕೊಟ್ಟು ಆಯ್ಕೆಯಾದ ಬಳಿಕ ನೀವು ಪುಗಸಟ್ಟೆ ಮತ ಹಾಕಿಲ್ಲ ಎಂದು ಮತದಾರರಿಗೆ ಹೇಳುತ್ತಾನೆ. ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆಯಾಗುತ್ತದೆ. ಓರ್ವ ಸಭಾಪತಿಯಾಗಿ ನಾನು ಈ ಮಾತು ಹೇಳುತ್ತೇನೆ ಎಂದರು.